ಕೊಳಚೆಯಂತಾದ ಸುಣ್ಣದ ಕಾಲುವೆ

A slushy limestone canal
Published on

ಹಿರೇಕೆರೂರ: ಪಟ್ಟಣದ ಐತಿಹಾಸಿಕ ದುರ್ಗಾದೇವಿ ಕೆರೆಗೆ ನೀರು ಹರಿಯುವ ಸುಣ್ಣದ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆಯುವ ಜತೆಗೆ ಚರಂಡಿಗಳ ತ್ಯಾಜ್ಯ, ಕೊಳಚೆ ನೀರು ಸೇರಿ ದುರ್ನಾತ ಬೀರುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕಾಲ್ವೀಹಳ್ಳಿಯ ರಾಮನಕೆರೆ, ಕಡೇನಂದಿಹಳ್ಳಿ, ಸುಣ್ಣದಕೊಪ್ಪ, ಹೊಲಬಿಕೊಂಡ, ತಡಸನಹಳ್ಳಿ ಹೀಗೆ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಹಳ್ಳದ ರೂಪದಲ್ಲಿ ಈ ಕಾಲುವೆ ಮೂಲಕ ಹರಿದು ಬಂದರೆ 650 ಎಕರೆ ವಿಸ್ತೀರ್ಣ ಹೊಂದಿರುವ ದುರ್ಗಾದೇವಿ ಕೆರೆ ಭರ್ತಿಯಾಗುತ್ತದೆ. ಕೆರೆ ಒಮ್ಮೆ ತುಂಬಿದರೆ ಕನಿಷ್ಠ 5 ವರ್ಷದವರೆಗೆ ಬತ್ತುವುದಿಲ್ಲ. ಕೆರೆಯಿಂದ ಅಂದಾಜು 10 ಸಾವಿರ ಹೆಕ್ಟೇರ್ ನೀರಾವರಿಗೊಳಪಡುತ್ತದೆ. 2014-15ರಲ್ಲಿ ಕೆರೆ ಅಭಿವೃದ್ಧಿ ನಾಡಿನ ಶ್ರಯೋಭಿವೃದ್ಧಿ ಯೋಜನೆಯಡಿ 2.80 ಕೋಟಿ ರೂ. ಅನುದಾನದಲ್ಲಿ 1.6 ಕಿ.ಮೀ. ಉದ್ದದವರೆಗೆ ಕಾಲುವೆ ಕಾಂಕ್ರೀಟಕರಣ ಮಾಡಲಾಗಿದೆ. ಇನ್ನು 1 ಕಿ.ಮೀ. ಕಾಲುವೆ ನಿರ್ಮಾಣ ಬಾಕಿ ಇದೆ. ತುಂಗಭದ್ರಾ, ಕುಮದ್ವತಿ ನದಿ ಮೂಲದಿಂದ ದುರ್ಗಾದೇವಿ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ಸುಣ್ಣದ ಕಾಲುವೆ ಮೂಲಕ ಕೆರೆಗೆ ನೀರು ಹರಿಯಬೇಕು. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕಾಲುವೆಗೆ ಸುಣ್ಣದ ಕಾಲುವೆ ಎಂದು ಕರೆಯಲಾಗುತ್ತದೆ. ಇದಕ್ಕೆ ಪಟ್ಟಣದ ಎಲ್ಲ ಚರಂಡಿಗಳ ನೀರು, ತ್ಯಾಜ್ಯಗಳು ಬಂದು ಸೇರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೊಳಚೆ ಸಂಗ್ರಹವಾಗಿದೆ. ಆದರೆ, ಪಪಂ ಹಾಗೂ ಸಣ್ಣ ನೀರಾವರಿ ಇಲಾಖೆ ಕಾಲುವೆ ಸ್ವಚ್ಛಗೊಳಿಸುವತ್ತ ಗಮನಹರಿಸಿಲ್ಲ.

ಕಾಲುವೆ ಅಕ್ಕಪಕ್ಕದಲ್ಲಿ ಮನೆ, ಅಂಗಡಿಗಳಿವೆ. ನಿತ್ಯ ಕಾಲುವೆಗೆ ತ್ಯಾಜ್ಯ ಹಾಕಲಾಗುತ್ತಿದೆ. ಪಟ್ಟಣದ ಚರಂಡಿ ನೀರು ಸೇರುತ್ತಿದ್ದು, ಯಾವ ಇಲಾಖೆಯವರು ಸ್ವಚ್ಛಗೊಳಿಸಲು ಮುಂದಾಗುತ್ತಿಲ್ಲ. ಸೊಳ್ಳೆ ಕಾಟ ವಿಪರೀತವಾಗಿದೆ. ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ನಿಂತಿರುವುದರಿಂದ ಗಬ್ಬುನಾತ ಬೀರುತ್ತಿದೆ. | ಪ್ರವೀಣ ಹಂಪಾಳಿ ಸ್ಥಳಿಯ ನಿವಾಸಿ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ಪದೇಪದೆ ತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ಕಳೆದ ವರ್ಷ ಕಾಲುವೆ ಸ್ವಚ್ಛಗೊಳಸಲಾಗಿತ್ತು. ಈ ಸಾಲಿನಲ್ಲಿ ಅನುದಾನ ಬಂದಿಲ್ಲ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಅನುದಾನ ಬಂದ ಕೂಡಲೆ ಸ್ವಚ್ಛಗೊಳಿಸಲಾಗುವುದು ಹಾಗೂ ಬಾಕಿ ಉಳಿದ ಕಾಲುವೆ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳಿಸಲಾಗುವುದು. | ಎಸ್.ವಿ. ಹಾವನೂರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣನೀರಾವರಿ ಇಲಾಖೆ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net