ಜಾನುವಾರುಗಳ ಜೀವ ಹಿಂಡುವ ಚರ್ಮಗಂಟು

CHARMAGANTU
Published on

ಶಿರಸಿ: ಹೈನುಗಾರಿಕೆಯನ್ನೇ ಕುಂಠಿತಗೊಳಿಸಿದ್ದ ಚರ್ಮಗಂಟು ರೋಗ ಈಗ ಮತ್ತೆ ತಾಲೂಕಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿದೆ. ಕಳೆದೆರಡು ವರ್ಷಗಳ ಹಿಂದೆ ತೀವ್ರಗೊಂಡು ರೈತರನ್ನು ಕಂಗಾಲಾಗಿಸಿದ್ದ ಈ ಕಾಯಿಲೆ ಈಗ ಜಾನುವಾರುಗಳ ಜೀವ ಹಿಂಡುತ್ತಿರುವುದು ರೈತರಲ್ಲಿ ಭಯ ಮೂಡಿಸುತ್ತಿದೆ.

ಎರಡು ವರ್ಷಗಳ ಹಿಂದೆ ತಾಲೂಕಿನ ಬನವಾಸಿ ಭಾಗದ ಆಕಳುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ಕಾಯಿಲೆ ತಾಲೂಕಿನ ಎಲ್ಲೆಡೆ ವ್ಯಾಪಿಸಿಕೊಂಡಿತ್ತು. ಆರೋಗ್ಯದಿಂದ ಇರುವ ಆಕಳು ಒಮ್ಮೆಲೇ ನಿತ್ರಾಣಗೊಂಡು ಕೆಲವೊಮ್ಮೆ ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ಬಾಯಿಯಿಂದ ಪೊರೆ ಮಾದರಿಯ ಲೋಳೆ ಸುರಿಸುವಿಕೆ ಆರಂಭವಾಗಿ ಕೆಲ ದಿನಗಳಲ್ಲಿಯೇ ಆಕಳುಗಳ ಚರ್ಮದ ಮೇಲೆ ಸುಕ್ಕುಗಟ್ಟಿದ ಮಾದರಿಯಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಫಾಕ್ಸ್ ವೈರಡ್ ಕುಟುಂಬಕ್ಕೆ ಸೇರಿದ ವೈರಸ್‌ನಿಂದ ಉಂಟಾಗುವ ಈ ಕಾಯಿಲೆ ನೊಣಗಳು ಮತ್ತು ಉಣ್ಣೆಗಳಿಂದ ಹರಡುತ್ತದೆ. ಸಾಮಾನ್ಯವಾಗಿ ಮೇಯಲು ಬಿಟ್ಟ ಆಕಳುಗಳಲ್ಲಿ ಈ ರೋಗ ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ. ನೊಣಗಳು ರೋಗ ಪೀಡಿತ ಆಕಳನ್ನು ಕಚ್ಚಿ ಬಳಿಕ ಆರೋಗ್ಯವಂತ ಆಕಳಿಗೆ ಕಚ್ಚಿದರೆ ಈ ರೋಗ ವ್ಯಾಪಿಸಿಕೊಳ್ಳುತ್ತ ಸಾಗುತ್ತದೆ. ಹೀಗಾಗಿ, ತಾಲೂಕಿನ ರೈತರು 2022ರಲ್ಲಿ ಆಕಳನ್ನು ಕಟ್ಟಿ ಹಾಕಿಯೇ ಸಾಕಿದ್ದರು. ಆದರೂ ಅಂತಹ ಆಕಳುಗಳಲ್ಲಿಯೂ ಕಾಣಿಸಿಕೊಂಡಿತ್ತು.

2022ರಲ್ಲಿ ಪಶು ಸಂಗೋಪನಾ ಇಲಾಖೆ ತಾಲೂಕಿನ ಪಶುಗಳಿಗೆ ಚುಚ್ಚುಮದ್ದು ನೀಡುವ ಮೂಲಕ ರೋಗವನ್ನು ನಿಯಂತ್ರಿಸಿತ್ತು. ಇನ್ನೊಂದೆಡೆ ರೈತರು ಸಹ ಕೆಲ ಸಾಂಪ್ರದಾಯಿಕ ಔಷಧಗಳನ್ನು ಆಕಳಿಗೆ ನೀಡಿದ್ದರು. ಕೆಂಪಿರುವೆಗಳ ಕಷಾಯವನ್ನು ಆಕಳಿಗೆ ಕೊಡುವ ಮೂಲಕ, ಈ ರೋಗವನ್ನು ಸ್ಥಳೀಯ ಔಷಧಗಳಿಂದಲೂ ನಿಯಂತ್ರಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಬಹುತೇಕ ಕಾಣೆಯಾಗಿದ್ದ ಚರ್ಮಗಂಟು ರೋಗ ಈಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ಮುಖ್ಯವಾಗಿ ಈ ರೋಗ ಕರುಗಳಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಕರುಗಳ ಬೆಳವಣಿಗೆ ಕುಂಠಿತವಾಗತೊಡಗಿದೆ.

ದುಬಾರಿಯಾಯ್ತು ನಿರ್ಲಕ್ಷೃ

ಚರ್ಮಗಂಟು ರೋಗ ತಾಲೂಕಿನ ಬನವಾಸಿ, ಹುಲೇಕಲ್, ಸಂಪಖಂಡ ಹೋಬಳಿಯ ಕೆಲ ಹಳ್ಳಿಗಳಲ್ಲಿಯೂ ಕಾಣಿಸಿಕೊಂಡಿದೆ.
ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಚರ್ಮಗಂಟು ರೋಗದ ಲಸಿಕೆಯನ್ನು ಐದು ತಿಂಗಳ ಒಳಗಿನ ಕರುಗಳಿಗೆ ನೀಡುವುದಿಲ್ಲ. ಕರು ಬೆಳವಣಿಗೆ ಆದ ಬಳಿಕ ಲಸಿಕೆ ಕೊಡಿಸಬೇಕಾಗಿತ್ತಾದರೂ ರೈತರು ನಿರ್ಲಕ್ಷ್ಯ ಮಾಡಿದ್ದರು. ಹೀಗಾಗಿ, ಈಗ ರೋಗ ತೀವ್ರವಾಗಿ ಕಾಡಿದೆ. ಒಂದು ಅಂದಾಜಿನಂತೆ ತಾಲೂಕಿನ ಸುಮಾರು 500 ಕರುಗಳು ಮತ್ತು ಆಕಳುಗಳು ಚರ್ಮಗಂಟು ರೋಗಕ್ಕೆ ಒಳಗಾಗಿವೆ. ರೋಗ ಕಾಣಿಸಿಕೊಂಡ ಹಳ್ಳಿಗೆ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ತೆರಳಿ ಲಸಿಕೆ ನೀಡಲಾರಂಭಿಸಿದೆ.

ತಾಲೂಕಿನ ಹಳ್ಳಿಗಳಲ್ಲಿ ಅಲ್ಲಲ್ಲಿ ಪಶುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಶಿರಸಿ ನಗರದಲ್ಲಿಯೂ ರೋಗಕ್ಕೆ ಒಳಗಾದ ಆಕಳು, ಕರುಗಳಿಗೆ ಚಿಕಿತ್ಸೆ ನೀಡಿ ಕಡಿಮೆ ಮಾಡಿದ್ದೇವೆ. ಈ ಬಾರಿ ಕರುಗಳಲ್ಲಿಯೇ ರೋಗ ಜಾಸ್ತಿ ಇದೆ.ಡಾ. ಗಜಾನನ ಹೊಸ್ಮನಿ, ತಾಲೂಕು ಪಶು ಸಂಗೋಪನಾ ಅಧಿಕಾರಿ, ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net