

ಹಗರೆ : ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತೆವೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಮಾದೀಹಳ್ಳಿ ಹೋಬಳಿ ಹಗರೆಯಲ್ಲಿ ಇತ್ತೀಚೆಗೆ ಅಯೋಜಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು, ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ತಾಲೂಕು ಕೇಂದ್ರಕ್ಕೆ ಅಲೆದಾಡಬಾರದು ಎಂಬ ಕಾರಣದಿಂದ ಪ್ರತಿ ಹೋಬಳಿ ಕೇಂದ್ರದ ಒಂದೊಂದು ದಿನ ಕಂದಾಯ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಈ ಸ್ವತ್ತು ಮಾಡುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಪಿಡಿಒ ಯಿಂದ ಮಾಹಿತಿ ಪಡೆದರು. ಸಮಸ್ಯೆ ಬಗೆಹರಿಸುವಂತೆ ಸೂಚನೆ ನಿಡಿದರು ಪೋಲೀಸ್ ಠಾಣಾ ಕಟ್ಟಡ ನಿರ್ಮಾಣಕ್ಕೆ ಪಂಚಾಯಿತಿ ಪಕ್ಕದಲ್ಲಿರುವ ಜಾಗವನ್ನು ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಸಮಸ್ಯೆ ಆಲಿಸಿ ಮಾತನಾಡಿದ ತಹಸೀಲ್ದಾರ್ ಮಮತಾ, ಮಾದೀಹಳ್ಳಿ ಹೋಬಳಿಯ 6 ಗ್ರಾಮ ಪಂಚಾಯಿತಿ ಸೇರಿದಂತೆ ಒಟ್ಟು 79 ಅರ್ಜಿಗಳು ಬಂದಿದೆ. ಇದರಲ್ಲಿ 54 ಪೌತಿಖಾತೆ ಮಾಡಲು, ಉಳಿದ 5 ಹಿಡುವಳಿ ಜಮೀನಿನಲ್ಲಿ ದಾರಿ ಬಿಡಿಸಿಕೊಡಲು ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅಡವಿ ಬಂಟೇನಹಳ್ಳಿ ಗ್ರಾಮದ 244 ರೈತರು 850 ಎಕರೆ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಆದರೆ ಅದು ಅರಣ್ಯ ಇಲಾಖೆ ಜಾಗ ಎಂದು ಇಲಾಖೆಯವರು ಪದೇ ಪದೆ ತೊಂದರೆ ನೀಡುತ್ತಾರೆ ಎಂದು ಜನರು ದೂರಿದರು. ಸ್ಥಳದಲ್ಲಿದ್ದ ಆರ್‌ಎಫ್‌ಒ ಅವರಿಂದ ಮಾಹಿತಿ ಪಡೆದು ದಾಖಲಾತಿ ಪರಿಶೀಲನೆ ಮಾಡಲಾಯಿತು.
ಇದು ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದೆ. ಆದರೂ ರೈತರಿಗೆ ಅನ್ಯಾಯವಾಗಬಾರದು. ಇರುವಷ್ಟು ದಿನ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಬಾರದು. ರೈತರ ಮೇಲೆ ಕೇಸು ದಾಖಲಿಸಬಾರದು ಎಂದು ಶಾಸಕ ಸುರೇಶ್ ಸೂಚನೆ ನೀಡಿದರು. ಇದಕ್ಕೆ ರೈತರು ಹಾಗೂ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡರು.
ಕಾರ್ಯಕ್ರಮದಲ್ಲಿ 6 ಜನರಿಗೆ ಪಿಂಚಣಿ ಮಂಜೂರು ಮಾಡಿ 94 ಸಿ(ಮನೆಗಳ ಅಕ್ರಮ-ಸಕ್ರಮ) 7 ಜನರಿಗೆ ಹಕ್ಕು ಪತ್ರ ವಿತರಿಸುವ ಮೂಲಕ ಹೊಬಳಿಯಲ್ಲಿ ಯಾವುದೇ ಒಂದು ಅರ್ಜಿ ಬಾಕಿ ಉಳಿಯದಂತೆ ಮುಕ್ತಾಯ ಮಾಡಿದರು.
ತಾಪಂ ಇಒ ವಸಂತಕುಮಾರ್, ಹಗರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೇಶ್, ಕಂದಾಯ ಇಲಾಖೆ ಮಾದೀಹಳ್ಳಿ ಹೋಬಳಿ ಉಪತಹಸಿಲ್ದಾರ್ ಮಹೇಂದ್ರ, ರಾಜಸ್ವ ನಿರೀಕ್ಷಕ ಗುರುರಾಜ್ ಇತರರು ಇದ್ದರು.