

ಕೆ.ಆರ್.ಪೇಟೆ: ಸಾರ್ವಜನಿಕರಿಗೆ ಹಲವಾರು ಸಮಸ್ಯೆಗಳು ಇರುತ್ತವೆ. ಇರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೆ ಪಕ್ಷಾತೀತವಾಗಿ ಎಲ್ಲರಿಗೂ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ರೈತರ ಹಿತದೃಷ್ಟಿಯಿಂದ ಮೈಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಕೃಷಿ ವಿವಿಯನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ರಾಜ್ಯ ಸರ್ಕಾರ ಇ ಖಾತೆ, ಇ ಸ್ವತ್ತು, ಬಿ ಸ್ವತ್ತುಗಳ ನಿಯಮಾವಳಿಗಳನ್ನು ಸರಳೀಕರಣಗೊಳಿಸಲು ಚಿಂತನೆ ನಡೆಸಿದೆ. ಶೀಘ್ರದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಲು ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು. ಕಳೆದ ಮೂರು ತಿಂಗಳಲ್ಲಿ ಕೆ.ಆರ್.ಪೇಟೆಯಲ್ಲಿ 219 ಪೋಡಿಯನ್ನು ದುರಸ್ತ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8000 ಪೌತಿ ಖಾತೆ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.
ದೂರು ಕೇಂದ್ರ ತೆರೆಯಿರಿ: ಕಂದಾಯ ಹಾಗೂ ಇತರ ಇಲಾಖೆಗಳಿಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಕಚೇರಿಗಳಲ್ಲಿ ಕೆಲಸಗಳು ಆಗದಿದ್ದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ದೂರು ಕೇಂದ್ರ ತೆರೆಯಿರಿ. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಪರಿಶೀಲಿಸಬೇಕು ಎಂದು ತಿಳಿಸಿದರು.
ಸಮಸ್ಯೆಗಳನ್ನು ಒಮ್ಮೆಲೇ ಪರಿಹರಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಸಮಸ್ಯೆಗಳು ಇನ್ನು ಉಳಿದಿವೆ ಎಂದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಜನರು ಕಾರಣವೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ. ಮಂಜು ಮಾತನಾಡಿ, 26.80 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವರಿ ಸಚಿವರು ಲೋಕಾರ್ಪಣೆ ಮಾಡಿದ್ದಾರೆ. ತಾಲೂಕಿನಲ್ಲಿ ಅಗತ್ಯಕ್ಕನುಗುಣವಾಗಿ ಕೆರೆ ಅಭಿವೃದ್ಧಿ ಕಾಮಗಾರಿಗಳು, ವಿದ್ಯುತ್ ಉಪ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕೆರೆಕಟ್ಟೆಗಳು ಪ್ರವಾಹದ ಸಂದರ್ಭದಲ್ಲಿ ಒಡೆದು ಹೋಗಿವೆ. ಸಚಿವರು ಜಿಲ್ಲೆಯ ಕೆರೆಕಟ್ಟೆಗಳನ್ನು ದುರಸ್ತಿ ಮಾಡಿಕೋಡಿ ಎಂದು ಸಚಿವರಿಗೆ ಮನವಿ ಮಾಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಗಳಿಗೆ ಹಾಗೂ ಕೃಷಿ ಯಂತ್ರೀಕರಣ ಯೋಜನೆಯಡಿ ಸಹಾಯಧನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಕನ್ಯ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಪುಸ್ತಕ ವಿತರಿಸಲಾಯಿತು. ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಪೌತಿ ಖಾತೆ ಪತ್ರ, ದರಖಾಸ್ತು ಪತ್ರ ವಿತರಿಸಲಾಯಿತು.
ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಾಜಿ ಶಾಸಕ ಬಿ.ಪ್ರಕಾಶ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಸುಷ್ಮಾ ಇತರರು ಇದ್ದರು.