

ನಂಜನಗೂಡು: ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜನಪ್ರತಿನಿಧಿಯಾಗಿ, ಪಕ್ಷದ ಸೂಚನೆ ಮೇರೆಗೆ ಕಳೆದ ತಿಂಗಳು ನಡೆದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದೇನೆ. ಪಕ್ಷಾತೀತವಾಗಿ ದೇಶದ ಬೆನ್ನೆಲುಬಾದ ರೈತರ ಸಂಕಷ್ಟಗಳಿಗೆ ನೆರವಾಗುವ ಅವಕಾಶವೂ ಈಗ ನನಗೆ ಬಂದಿದೆ ಎಂದು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಹೇಳಿದರು.
ಸಮೃದ್ಧಿ ಗೆಳೆಯರ ಬಳಗದಿಂದ ನಂಜನಗೂಡಿನ ಪ್ರಗತಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ತಂದೆ ರಾಜಕಾರಣದ ಜತೆಗೆ ಕೃಷಿಯನ್ನು ಬಹಳ ಪ್ರೀತಿ ಗೌರವದಿಂದ ಕಂಡು, ಮಾತಿನಲ್ಲೇ ಅಲ್ಲದೆ ಬದುಕಿನಲ್ಲೂ ಅಳವಡಿಸಿಕೊಂಡು ಪ್ರಗತಿರ ರೈತರಾಗಿದ್ದರು. ನನಗೆ ಸಿಕ್ಕ ಈ ಸುವರ್ಣ ಅವಕಾಶವನ್ನು ಪ್ರಾಮಾಣಿಕ ನಿಸ್ವಾರ್ಥ ಸೇವೆಗೆ ಮುಡುಪಾಗಿಡುತ್ತೇನೆ. ಇದಕ್ಕೆ ನನ್ನ ತಂದೆ ಆಶೀರ್ವಾದ, ತಾಯಿಯ ಮಾರ್ಗದರ್ಶನ, ಹಿರಿಯರ ಸಲಹೆ ನನಗೆ ಸದಾ ದಾರಿದೀಪವಾಗಿದೆ. ರೈತರ ಹಿತ ಕಾಪಾಡಲು ನಾನು ಸದಾ ಬದ್ಧನಾಗಿದ್ದೇನೆ. ಸಮೃದ್ಧಿ ಗೆಳೆಯರ ಬಳಗದ ಅಭಿನಂದನೆ ಜವಾಬ್ದಾರಿ ಹೆಚ್ಚಿಸುವ ಮೂಲಕ ನನ್ನನ್ನು ಮತ್ತಷ್ಟು ಕಾರ್ಯೋನ್ಮುಖರಾಗುವಂತೆ ಮಾಡಿದ್ದೀರಿ. ತಪ್ಪು ಮಾಡಿದಾಗ ತಿದ್ದಿ, ಒಳ್ಳೆಯದನ್ನು ಮಾಡಿದಾಗ ಪ್ರೋತ್ಸಾಹಿಸುವ ನೈತಿಕ ಬಲ ನನಗೆ ನೀಡಬೇಕು. ರಾಜಕಾರಣ ಚುನಾವಣೆಯಲ್ಲಿಯೇ ವಿನಾ ಅಭಿವೃದ್ಧಿ ವಿಚಾರದಲ್ಲಿ ಅಲ್ಲ ಎಂದರು. ನನ್ನ ಜೀವಿತಾವಧಿಯಲ್ಲಿ ಕೈಲಾದಷ್ಟು ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವೆ ಎಂದರು.
ಸಮೃದ್ಧಿ ಗೆಳೆಯರ ಬಳಗಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಕಲ್ಮಳ್ಳಿ ನಟರಾಜು ಮಾತನಾಡಿದರು. ಶ್ರೀ ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೃಷಭೇಂದ್ರ, ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಬಸವಟ್ಟಿಗೆ ಪ್ರಭು ಸ್ವಾಮಿ, ಆಸರೆ ಬಳಗದ ಅಧ್ಯಕ್ಷ ಹೊನ್ನಪ್ಪ ಕುರಹಟ್ಟಿ, ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಶಾಂತ ಮಲ್ಲಪ್ಪ, ಗುರುಮಲ್ಲಪ್ಪ ಪ್ರೌಢಶಾಲೆ ಶಿಕ್ಷಕ ಗುರುಪ್ರಸಾದ್, ಬೊಮ್ಮಲಾಪುರ ಮಹದೇವಸ್ವಾಮಿ, ಹೊರೆಯಾಲ ಮನೀಶ, ಸುಗಮ ಸಂಗೀತ ಗಾಯಕ ಬಿಳಿಗೆರೆ ಶಿವ ಶಂಕರ, ಸದ್ಗುರು ವೈರಾಗ್ಯ ನಿಧಿ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಗೀತಾ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಕಲ್ಪನಾ, ನಿವೃತ್ತ ಶಿಕ್ಷಕ ಅರಳಿಕಟ್ಟೆ ರಾಜಪ್ಪ ಇತರರು ಇದ್ದರು.