

ಅರಸೀಕೆರೆ: ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆದು ನಗರ ನಿವಾಸಿಗಳ ಕುಂದುಕೊರತೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ನಗರ ಸ್ಥಳೀಯ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಉದ್ಯಮಿ ಬಿ.ಎಸ್. ಅರುಣ್‌ಕುಮಾರ್ ಹೇಳಿದರು.
ನಗರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಾಧಿಕಾರ ಹಾಗೂ ಆಶ್ರಯ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಅತ್ಯಂತ ವಿಶಾಲ ವ್ಯಾಪ್ತಿಯ ನಗರಕ್ಕೆ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಜನಸಂಖ್ಯೆ ಹೆಚ್ಚಿದಂತೆ ನಿವೇಶನಗಳ ಬೇಡಿಕೆ, ಮನೆಗಳ ನಿರ್ಮಾಣ, ಮೂಲ ಸೌಕರ್ಯ ಕಲ್ಪಿಸುವುದು, ಬಡಾವಣೆಗಳ ಅನುಮೋದನೆ ಸೇರಿದಂತೆ ಹಲವು ಬಗೆಯ ಕೋರಿಕೆ ಬರುತ್ತವೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ನಗರಸಭೆ ಸದಸ್ಯರ ಸಹಕಾರದಿಂದ ನಗರ ನಿವಾಸಿಗಳಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲು ಶ್ರಮಿಸಲಿದ್ದೇನೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಪಕ್ಷದ ಮುಖಂಡರ ಗೌರವ ಹೆಚ್ಚಿಸುತ್ತೇನೆ ಎಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಿದ್ದೇನೆ. ನಗರಸಭೆ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರ ಸದಸ್ಯರು ಜನಪರ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸುಬ್ರಹ್ಮಣ್ಯಬಾಬು, ಮನುಕುಮಾರ್ ಹಾಗೂ ಬಾಲಮುರುಗನ್ ಪ್ರಾಧಿಕಾರದ ಸಹ ಸದಸ್ಯರಾಗಿ ಹಾಗೂ ಶ್ರೀನಿವಾಸ್ ಪಾಪಣ್ಣಿ, ರೂಪಾ ಗುರುಮೂರ್ತಿ, ಅಣ್ಣಾದೊರೈ, ಅಮ್ಜಾದ್ ಪಾಷಾ ಆಶ್ರಯ ಸಮಿತಿ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್, ಉಪಾಧ್ಯಕ್ಷ ಜವನಪ್ಪ, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಪೌರಾಯುಕ್ತ ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಬಿಳಿಚೌಡಯ್ಯ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ, ಜಿ.ವಿ.ಬಸವರಾಜು ಸೇರಿದಂತೆ ನಗರಸಭೆ ಸದಸ್ಯರು, ನಾಗರಿಕರು ಹಾಜರಿದ್ದರು.