

ಹಳಿಯಾಳ: ಸೂರಿಲ್ಲದವರಿಗೆ ಸೂರು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಜಿ+2 ಆಶ್ರಯ ಮನೆಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಹಲವಾರು ಕುಟುಂಬಗಳ ಸ್ವಂತ ಸೂರಿನ ಕನಸು ನನಸಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಸಬ್ ಜೈಲ್ ಹಿಂಬದಿ ಎಎಚ್‌ಪಿ ಘಟಕದಡಿ ನಿರ್ಮಾಣವಾದ ಜಿ+2 ಮಾದರಿಯ ಆಶ್ರಯ ಮನೆಗಳನ್ನು ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.
ಹಳಿಯಾಳ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ನೀರು, ವಿದ್ಯುತ್, ತರಕಾರಿ, ಶಿಕ್ಷಣ ಇತ್ಯಾದಿ ಮೂಲಸೌಕರ್ಯಗಳಿಗೆ ಕೊರತೆ ಇಲ್ಲ. ಹೊರಗಿನಿಂದ ಬಂದವರು ಇಲ್ಲಿಯೇ ನಿವೇಶನ ಖರೀದಿಸಿ ಕಾಯಂ ನಿವಾಸಿಗಳಾಗುತ್ತಿದ್ದಾರೆ. ಅಲ್ಲದೆ, ಹಳಿಯಾಳದ ಜನಸಂಖ್ಯೆ ಬೆಳೆಯುತ್ತಿದ್ದು, ಇಲ್ಲಿರುವ ಬಡವರಿಗೆ ನಿವೇಶನದ ಸಮಸ್ಯೆ ಎದುರಾಗಿ ಜಿ+2 ಮಾದರಿಯಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಮುಂದೆಯೂ ಬಡವರಿಗೆ ಸೂರಿನ ಸಮಸ್ಯೆ ಆಗದಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ನಂತರ ನೂತನವಾಗಿ ನಿರ್ಮಾಣವಾದ ಜಿ+2 ಮಾದರಿ ಆಶ್ರಯ ಮನೆಗಳ ಬಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮನೆಗಳ ಉದ್ಘಾಟನೆ ಕಾರ್ಯ ನೆರವೇರಿಸಿ, 240 ಜಿ+2 ಆಶ್ರಯ ಮನೆಗಳನ್ನು 20 ಬ್ಲಾಕ್‌ಗಳಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಎ ದಿಂದ ಎನ್‌ವರೆಗೆ ಒಟ್ಟು 160 ಮನೆಗಳ ಕೀಲಿ ಕೈಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದ್ದು, ಉಳಿದ 80 ಮನೆಗಳನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣಾ ಮಾದರ, ಸದಸ್ಯರಾದ ಶಮೀಮಬಾನು ಜಂಬೂವಾಲೆ, ಶಂಕರ ಬೆಳಗಾಂವಕರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ಇದ್ದರು.