

ಅರಸೀಕೆರೆ: ಸಮಾಜಮುಖಿ ಚಟುವಟಿಕೆ ಆಯೋಜಿಸುವ ಮೂಲಕ ಸಂಸ್ಥೆಯ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಕುಮಾರ್ ಭರವಸೆ ನೀಡಿದರು.
ನಗರದ ಮೈಲಾರ ಹೈಟ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ, ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೃತಕ ಕಾಲು ಜೋಡಣೆ , ಅನೈರ್ಮಲ್ಯ ತೊಡೆದು ಹಾಕುವುದು ಸೇರಿದಂತೆ ಹತ್ತಾರು ಚಟುವಟಿಕೆಯನ್ನು ಸ್ಥಳೀಯ ಕ್ಲಬ್ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಶತಮಾನದ ಇತಿಹಾಸ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರ ನೀಡಿದ ಲಯನ್ ನವೀನ್ ಚಂದ್ರಶೆಟ್ಟಿ ಮಾತನಾಡಿ, ಹೊಸ ಸದಸ್ಯ ಕ್ರಿಯಾಶೀಲರಾಗಿ ತೊಡಗಿಸಿಕಳ್ಳಲು ಹಿರಿಯರ, ಸಲಹೆ ಮಾರ್ಗದರ್ಶನ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಬಹುದೊಡ್ಡ ಕ್ಲಬ್ ಎಲ್ಲ ರೀತಿಯ ಸೆವಾ ಕಾರ್ಯದಲ್ಲಿ ನಿರತವಾಗಿದ್ದು ಎಲ್ಲರ ಸಹಕಾರ ಪಡೆದು ಪ್ರಗತಿ ಪಥದಲ್ಲಿ ಸಾಗೋಣ ಎಂದು ಆಶಿಸಿದರು.
ಲಯನ್ ಸಂಜೀತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಹಾರನಹಳ್ಳಿ ಲೋಕೇಶ್ ಮಾತನಾಡಿದರು. ಕಾರ್ಯದರ್ಶಿಯಾಗಿ ಉಪನ್ಯಾಸಕ ಗೋವಿಂದ ರಾಜ್, ಮರಿಯಾ ಆಂತೋವನ್ ಖಜಾಂಚಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಯನ್ ವೆಂಕಟೇಶ್, ಚಂದ್ರಶೇಖರ್, ಮಂಜುನಾಥ್, ಆಂತೋಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.