

ಕಡೂರು: ಕಳೆದ 30 ವರ್ಷಗಳ ರಾಜಕಾರಣದ ಅವಧಿಯಲ್ಲಿ ಪ್ರಾಮಾಣಿಕತೆಗೆ ಒತ್ತು ನೀಡಿದ್ದರ ಫಲವಾಗಿ ಎಲ್ಲ ವರ್ಗದ ಸಮಾಜಗಳ ವಿಶ್ವಾಸ ಗಳಿಸಲು ಸಾಧ್ಯವಾಯಿತು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಹಜರತ್ ಜರೀನಾ ಬೀಬಿ ದರ್ಗಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡುವುದೇ ಮುಖ್ಯ ಉದ್ದೇಶ. ಜತೆಯಲ್ಲಿ ಎಲ್ಲರ ವಿಶ್ವಾಸವೂ ಅಷ್ಟೇ ಮುಖ್ಯವಾಗುತ್ತದೆ ಎಂಬ ನಂಬಿಕೆ ಹೊಂದಿದ್ದೇನೆ ಎಂದರು.
ದರ್ಗಾ ಸಮಿತಿ ಅಧ್ಯಕ್ಷ ಇಮ್ರಾನ್ ಖಾನ್ ಮಾತನಾಡಿ, ಸತತ ನಾಲ್ಕು ಬಾರಿ ಪುರಸಭೆ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ಅವರ ಕೊಡುಗೆ ಅಪಾರ. ಮುಂದೆಯೂ ಸಮಿತಿಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯ ಸೈಯಾದ್ ಯಾಸೀನ್, ಸಮಿತಿ ಕಾರ್ಯದರ್ಶಿ ಅನ್ಸರ್, ಖಜಾಂಚಿ ಅಬ್ದುಲ್ ಖಾದರ್, ನಿರ್ದೇಶಕರಾದ ಅಫ್ರೋಜ್, ನಯಾಜ್, ಮಕ್‌ಸೂದ್, ರಫೀಕ್, ಫೈಜಾನ್, ನವಾಜ್ ಖಾನ್, ಮುಖಂಡ ಚಿನ್ನರಾಜು, ಜಬಿ ಇತರರಿದ್ದರು.