ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ

ಇಮ್ರಾನ್ ಖಾನ್
ಇಮ್ರಾನ್ ಖಾನ್
Published on

ಅರಸೀಕೆರೆ; ಇಂದಿರಾನಗರ ಹಾಗೂ ಚೌಡೇಶ್ವರಿ ಬಡಾವಣೆಯಲ್ಲಿನ ನಾಗರಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ 19ನೇ ವಾರ್ಡ್‌ನ ನೂತನ ಪಕ್ಷೇತರ ಸದಸ್ಯ ಇಮ್ರಾನ್ ಖಾನ್ ಹೇಳಿದರು.

ನಗರಸಭೆ ಬಳಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಗರಸಭೆ ಉಪ ಚುನಾವಣೆಯಲ್ಲಿ ಉಭಯ ಬಡಾವಣೆಗಳ ಮತದಾರರು ನನಗೆ ಆಶಿರ್ವಾದ ಮಾಡಿದ್ದು, ಅವರ ಆಶೋತ್ತರಗಳನ್ನು ಈಡೇರಿಸಲಾಗುವುದು. ಕುಡಿಯುವ ನೀರು, ವಿದ್ಯುತ್, ಬೀದಿ ದೀಪ ಅಳವಡಿಕೆ, ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ತೆರಿಗೆ ಪಾವತಿಸುವ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ನನ್ನ ಮೊದಲ ಅದ್ಯತೆ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತದ ಗಮನ ಸೆಳೆಯಲಾಗುವುದು. ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು. ನೈರ್ಮಲ್ಯ ಕಾಪಾಡಿಕೊಳ್ಳಲು ಎರಡೂ ಬಡಾವಣೆ ನಿವಾಸಿಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಎಚ್ಚರಿಕೆ: ಎರಡೂ ಬಡಾವಣೆಗಳಲ್ಲಿ ಹೊಸದಾಗಿ ನಿರ್ಮಿಸಿರುವ ಬಡಾವಣೆಗಳಿಗೆ ಲೇಔಟ್ ಮಾಲೀಕರು ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸರಿಯಾಗಿ ಕಲ್ಪಿಸಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಸಮಸ್ಯೆ ಪರಿಹರಿಸುವ ಜವಾಬ್ದಾರಿ ನಿಮ್ಮದಾಗಿದ್ದು, ನಿವಾಸಿಗಳಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸುಳ್ಳು: ನಗರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದೆ. ಕೆಲವರ ಕುತಂತ್ರದಿಂದ ಟಿಕೆಟ್ ತಪ್ಪಿತು. ಪಕ್ಷೇತರನಾಗಿ ಸ್ಪರ್ಧೆ ಮಾಡಿದ ನನಗೆ ನಿರೀಕ್ಷೆಗೂ ಮೀರಿ ಮತಕೊಟ್ಟು ಆಶೀರ್ವಾದ ಮಾಡಿದ್ದು, ನಾನು ಕಾಂಗ್ರೆಸ್ ಸೇರುತ್ತೇನೆಂದು ಕೆಲವರು ವದಂತಿ ಹಬ್ಬಿಸಿದ್ದಾರೆ. ಸುಖಾಸುಮ್ಮನೆ ಹೇಳುವ ಸುಳ್ಳನ್ನು ಯಾರೂ ನಂಬಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net