ಸರಳ, ಸುಂದರ ಬದುಕು ಇತರರಿಗೆ ಪ್ರೇರಣೆ

LXR CHANDRA
Published on

ಲಕ್ಷೆ್ಮೕಶ್ವರ: ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ನಡೆಯುತ್ತ ಕ್ರಿಯಾಶೀಲತೆ ಮತ್ತು ಕಾಯಕನಿಷ್ಠೆ ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಕೀರ್ತಿ, ಯಶಸ್ಸು, ಶ್ರೇಯಸ್ಸು ಹೊಂದುತ್ತಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ರೇವಣಸಿದ್ದಯ್ಯನವರ ಸಹಸ್ರಚಂದ್ರ ದರ್ಶನ ಹಾಗೂ ಶ್ರೀಮತಿ ದ್ರಾಕ್ಷಾಯಣಿ ರೇವಣಸಿದ್ದಯ್ಯ ಬಾಳಿಹಳ್ಳಿಮಠ ವೇದಿಕೆ (ಸಭಾ ಮಂಟಪ)ದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ರೇವಣಸಿದ್ದಯ್ಯನವರು ಸದಾ ಚಟುವಟಿಕೆ, ಕ್ರಿಯಾಶೀಲತೆಯಿಂದ ಒಕ್ಕಲುತನ, ವ್ಯಾಪಾರ ಮತ್ತು ರಾಜಕೀಯದ ಅನುಭವ ಹೊಂದಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಸರಳ, ಸುಂದರ, ಆರ್ಥಿಕ ಶಿಸ್ತಿನ ಬದುಕು ಪ್ರೇರಣೆಯಾಗಿದ್ದು ಸಹಸ್ರಚಂದ್ರಮಾನದ ಸಂಭ್ರಮಾಚರಣೆಯಲ್ಲಿರುವ ದಂಪತಿಗೆ ಪರಮಾತ್ಮನು ಆಯುರಾರೋಗ್ಯ, ದೀರ್ಘಾಯುಷ್ಯ, ಸುಖ-ಶಾಂತಿ ದಯಪಾಲಿಸಲಿ ಎಂದು ಹಾರೈಸಿದರು.

ಪಹಲ್ಗಾಮದಲ್ಲಿ ಅಮಾಯಕರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಿಗೆ ತಕ್ಕಶಾಸ್ತಿಯಾಗಲಿ. ಗುಂಡೇಟಿಗೆ ಬಲಿಯಾದ ಜೀವಗಳಿಗೆ ಶಾಂತಿ ಮತ್ತು ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ಸಿಗಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಿಪ ಸದಸ್ಯ ಎಸ್.ವಿ. ಸಂಕನೂರ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿದರು.

ಲಕ್ಷೆ್ಮೕಶ್ವರ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಬಂಕಾಪುರ ಆರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ, ಅಬ್ಬಿಗೇರಿ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ರೇವಣಸಿದ್ದಯ್ಯ ಬಾಳಿಹಳ್ಳಿಮಠ ದಂಪತಿ, ಬಾಳಿಹಳ್ಳಿಮಠ ಕುಟುಂಬದ ಡಾ. ರೇಣುಕ ಪ್ರಸಾದ, ಸಿದ್ಧರಾಮಸ್ವಾಮಿ, ವಿಜಯರುದ್ರಯ್ಯ, ವಿನಯಶಂಕರ ದಂಪತಿಗಳು ಸೇರಿ ಹಿರಿಯರು, ವಾಣಿಜ್ಯೋದ್ಯಮಿಗಳು, ಬಂಧು ಬಳಗದವರು ಪಾಲ್ಗೊಂಡಿದ್ದರು.

ಚಂದ್ರಣ್ಣ ಬಾಳಿಹಳ್ಳಿಮಠ, ಗುರುಪಾದಯ್ಯ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net