

ತೇರದಾಳ : ಬೆಳಗಾವಿ ಜಿಲ್ಲೆಯ ಜೈನಮುನಿ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ತೇರದಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜೈನ ಸಮಾಜ ಬಾಂಧವರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿದರು.
ಪಟ್ಟಣದ ಗೋಂಕ ಜಿನಾಲಯದಿಂದ ಹೊರಟ ಮೆರವಣಿಗೆ ಚಾವಡಿ ವೃತ್ತ, ಜವಳಿ ಬಜಾರ್, ಜೋಳದ ಬಜಾರ್, ಹಳಪೇಟ ಗಲ್ಲಿ, ಯಲ್ಲಮ್ಮನ ಗುಡಿ, ತರಕಾರಿ ಮಾರುಕಟ್ಟೆ ಮಾರ್ಗವಾಗಿ ವಿಶೇಷ ತಹಸೀಲ್ದಾರ್ ಕಚೇರಿವರೆಗೆ ತೆರಳಿ ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಅವರಿಗೆ ನೇಮಿನಾಥ ಗೋಂಕ ಜಿನಾಲಯ ದಿಗಂಬರ ಜೈನ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಜೈನ ಸಮಾಜದವರು ಅಹಿಂಸಾ ಪ್ರಿಯರು. ಅದರಲ್ಲಿ ಜೈನಮುನಿಗಳು ಅಹಿಂಸಾ ತತ್ವ ಆಚರಿಸುವ ಮಹಾನ್ ಸಂತರು. ಆದರೆ, ಈ ಘಟನೆ ಸಮಾಜಕ್ಕೆ ಖೇದವನ್ನುಂಟು ಮಾಡಿದ್ದು, ರಾಜ್ಯದಲ್ಲಿ ಜೈನಮುನಿಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಕೂಡಲೇ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೈನ ಸಮಾಜದ ಶ್ರಾವಕರು ಕೈಗೆ ಕಪ್ಪು ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಡಿ.ಆರ್. ಪಾಟೀಲ, ರಾಜು ನಂದೆಪ್ಪನವರ, ಸುರೇಶ ಅಕ್ಕಿವಾಟ, ಡಾ. ಮಹಾವೀರ ದಾನಿಗೊಂಡ, ನಿಲೇಶ ದೇಸಾಯಿ, ಬುಜಬಲಿ ವೆಂಕಟಾಪೂರ, ಬುಜಬಲಿ ಕೆಂಗಾಲಿ, ಮಹಾವೀರ ಕೊಕಟನೂರ, ಮಹಾವೀರ ಪಾಟೀಲ, ಅಜೀತ ಮಗದುಮ್, ಸುಕುಮಾರ ಪಾಟೀಲ, ವರ್ಧಮಾನ ಕಡಹಟ್ಟಿ, ಪರಪ್ಪ ಹಿಪ್ಪರಗಿ, ಮಹಾವೀರ ಬಿಲವಡಿ, ನಂದೆಪ್ಪ ನಂದೆಪ್ಪನವರ, ಧನಪಾಲ ಯಲ್ಲಟ್ಟಿ, ವರ್ಧಮಾನ ಖೇಬೋಜಿ ಸೇರಿ ನೂರಾರು ಸಂಖ್ಯೆಯಲ್ಲಿ ಶ್ರಾವಕರು ಭಾಗಿಯಾಗಿದ್ದರು. ಸ್ಥಳೀಯ ಠಾಣಾಧಿಕಾರಿ ಅಪ್ಪು ಐಗಳಿ ಸೂಕ್ತ ಬಂದೋಬಸ್ತ್ ನೀಡಿದ್ದರು.