ಸಂವಿಧಾನ ರಕ್ಷಣಾ ಸಮಿತಿಯಿಂದ ಮೌನ ಮೆರವಣಿಗೆ

8
Published on

ಮೈಸೂರು: ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಹಿಂದು, ಮುಸ್ಲಿಮರ ನಡುವೆ ಒಡಕು ಮೂಡಿಸುವ ಜತೆಗೆ ಸಿಎಎ ವಿರುದ್ಧ ಪ್ರತಿಭಟಿಸುವವರು ಹಾಗೂ ಸ್ವಾತಂತ್ರೃ ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಬಿಂಬಿಸಲು ಮುಂದಾಗಿದೆ ಎಂದು ಅರೋಪಿಸಿ ಸಂವಿಧಾನ ರಕ್ಷಣಾ ಸಮಿತಿಯಿಂದ ನಗರದಲ್ಲಿ ಸೋಮವಾರ ಸಂಜೆ ಮೌನ ಪ್ರತಿಭಟನೆ ನಡೆಯಿತು.

ನಗರದ ಸ್ವಾತಂತ್ರೃ ಹೋರಾಟಗಾರರ ಉದ್ಯಾನದಿಂದ ಗಾಂಧಿ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದ ಸಮಿತಿ ಕಾರ್ಯಕರ್ತರು, ಕರಪತ್ರ ಹಂಚಿ ಕೇಂದ್ರದ ಕ್ರಮವನ್ನು ಖಂಡಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಆರ್ಥಿಕ ಕುಸಿತ ಉಂಟಾಗಿದೆ. ಇದರಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ದಿಲ್ಲಿ ಸೇರಿದಂತೆ ಇನ್ನಿತರೆ ಕಡೆ ಕೋಮುಗಲಭೆಗೆ ಯತ್ನಿಸುತ್ತಿದೆ. ಇದಕ್ಕೆ ಪೊಲೀಸರನ್ನು ಬಳಸಿಕೊಂಡಿದ್ದು, ನ್ಯಾಯಾಲಯಗಳೇ ಈ ಕ್ರಮವನ್ನು ಟೀಕಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಎ ವಿರುದ್ಧ ಶಾಂತಿಯುತ ಹೋರಾಟ ಮಾಡಿದರೂ ಕೇಂದ್ರ ಸರ್ಕಾರದ ಸ್ಪಂದಿಸದೆ ನಿರ್ಲಕ್ಷೃ ತಾಳಿದೆ. ಮತ್ತೊಂದೆಡೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ನಕಲಿ ಹೋರಾಟಗಾರ, ಪಾಕಿಸ್ತಾನಿ ಏಜೆಂಟ್ ಎಂದು ಟೀಕಿಸಿದ್ದಾರೆ. ಇದನ್ನು ಹಲವು ಬಿಜೆಪಿ ಮುಖಂಡರು ಸಮರ್ಥಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಯತ್ನಾಳ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪ.ಮಲ್ಲೇಶ್, ಬಸವರಾಜು, ಹೊಸಕೋಟೆ ಬಸವರಾಜು, ಅಭಿರುಚಿ ಗಣೇಶ್, ಮರಂಕಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net