

ಚಿಕ್ಕಮಗಳೂರು: ಇವರೊಬ್ಬರಿಗೇನಾ ರಾಜಕೀಯ ಮಾಡೋಕೆ ಬರೋದು? ನಮಗೂ ಬರುತ್ತೆ. ಇವರಿಗಷ್ಟೇನಾ ಕಾರ್ಯಕರ್ತರು ಇರೋದು? ನಮಗೂ ಇದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ನವರ ಗೊಡ್ಡುಬೆದರಿಕೆಗೆ ಬಗ್ಗಲ್ಲ ನಾನು. ಕಾಂಗ್ರೆಸ್ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮಳೆ ಹಾನಿಪೀಡಿತ ಪ್ರದೇಶಗಳ ವೀಕ್ಷಣೆಗೆಂದು ನಿನ್ನೆ(ಗುರುವಾರ) ಕೊಡಗು ಜಿಲ್ಲೆಗೆ ಪ್ರವಾಸ ಹೋದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಸರ್ಕಲ್ ಬಳಿ ಸಿದ್ದು ಕಾರಿನತ್ತ ಮೊಟ್ಟೆ ಎಸೆದು 'go back' ಎಂದು ಆಕ್ರೋಶ ಹೊರಹಾಕಿದ್ದರು. ಸಿದ್ದರಾಮಯ್ಯ ಟಿಪ್ಪು ಶಿಷ್ಯ ಎಂದು ಘೋಷಣೆ ಕೂಗಿದ್ದರು. ವಿಪಕ್ಷ ನಾಯಕರತ್ತ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಈಗಾಗಲೇ ಮಡಿಕೇರಿಯಲ್ಲಿ ಸುಮಾರು 7 ಜನರನ್ನ ಬಂಧಿಸಲಾಗಿದೆ. ಅತ್ತ ಬಿಜೆಪಿ ವಿರುದ್ಧ ಬೆಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಇದರ ನಡುವೆ ಇಂದು(ಶುಕ್ರವಾರ) ಶೃಂಗೇರಿಗೆ ಆಗಮಿಸಿದ್ದ ಸಿದ್ದರಾಮಯ್ಯ, ಮೊಟ್ಟೆ ಎಸೆದ ಪ್ರಕರಣ ಕುರಿತು ಆಕ್ರೋಶ ಹೊರಹಾಕಿದರು. ನಮ್ಮ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ. ನಮಗೂ ರಾಜಕೀಯ ಮಾಡೋಕೆ ಬರುತ್ತೆ ಎಂದು ಎಚ್ಚರಿಸಿದರು.