ಬಸವಣ್ಣರ ವಚನ ತಿದ್ದಲು ಯಾರಿಂದಲೂ ಸಾಧ್ಯವಿಲ್ಲ, ವಿವಾದ ನಿಲ್ಲಲಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

siddalinga swamiji
Published on

ದಾವಣಗೆರೆ: ಬಸವಣ್ಣರ ವಚನಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ. ಮೂಲ ವಿಚಾರಗಳನ್ನು ತಿದ್ದದೆ ವಾಸ್ತವ ಸಂಗತಿಗಳನ್ನು ಪಠ್ಯದಲ್ಲಿ ನೀಡಬೇಕು. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ. ಈಗ ಉಂಟಾಗಿರುವ ವಿವಾದ ಮುಗಿದು ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ಧಗಂಗಾ ಶ್ರೀಗಳು, ಬಸವಣ್ಣ ಮಹಾನ್​ ಮಾನವತಾವಾದಿ. ಮನುಷ್ಯರ ಬದುಕಿಗೆ ಬೇಕಾದ ತತ್ವಗಳನ್ನು ನೀಡಿ ನಮಗೆ ಬೆಳಕಾಗಿದ್ದಾರೆ. ಅವರು ಕನ್ನಡಿ ಇದ್ದಂತೆ. ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಬೇಕಾದ ಮಾರ್ಗದರ್ಶನ ನೀಡಿದ್ದಾರೆ. ಇನ್ನೊಬ್ಬರ ಕಡೆಗೆ ಬೆರಳು ತೋರುವುದಕ್ಕಿಂತ ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎಂದರು.

ಬಸವಣ್ಣರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ವಿಚಾರಗಳು ಎಲ್ಲರಿಗೂ ಬೇಕಾಗಿದೆ. ಯಾವುದನ್ನೂ ತಿದ್ದದೆ ಮೂಲ ಸ್ವರೂಪದಲ್ಲಿ ನೀಡಬೇಕು. ಬಸವಣ್ಣರ ವಚನ ತಿದ್ದಲು ಹೋದರೆ ಅದು ಅಪಚಾರವಾಗುತ್ತದೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ತಿರುವುಗಳನ್ನು ಪಡೆಯುತ್ತಿದ್ದು, ಈ ರೀತಿ ಆಗಬಾರದು. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ. ಪಠ್ಯಪುಸ್ತಕಗಳಲ್ಲಿ ಅದರ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net