ಶೌಚಗೃಹಕ್ಕೆ ಮರ್ಯಾದೆ ತಂದ ಕಿರುಚಿತ್ರ

5-Saunshi-1,
Published on

ಸಂಶಿ: ವೃತ್ತಿ ವಿಭಿನ್ನವಾದರೂ ಒಂದೇ ಪ್ರವೃತ್ತಿಯುಳ್ಳ ಗ್ರಾಮೀಣ ಭಾಗದ ಜನರೇ ನಟಿಸಿ, ನಿರ್ದೇಶಿಸಿ, ನಿರ್ವಿುಸಿದ ‘ಮರ್ಯಾದೆ ಮನೆ’ ಎಂಬ ಕಿರುಚಿತ್ರ ಸುದ್ದಿ ಮಾಡುತ್ತಿದೆ. ಶೌಚಗೃಹ ನಿರ್ವಣದ ಕುರಿತು ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಿರುಚಿತ್ರ ನಿರ್ವಿುಸಿದ್ದು ಜ. 26ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ.

ಹುಬ್ಬಳ್ಳಿ, ಸಂಶಿ, ಪಶುಪತಿಹಾಳ, ಲಕ್ಷ್ಮೇಶ್ವರ, ಗುಡಗೇರಿ, ಅತ್ತಿಗೇರಿ, ರಟ್ಟಿಗೇರಿ ಗ್ರಾಮಗಳ ಸಮಾನ ವಯಸ್ಕರು ಸೇರಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಆಶಿಸಿ ಒಗ್ಗೂಡಿ ಕಾರ್ಯೋನ್ಮುಖರಾದರು. ಆಗ ಅವರು ಗಮನಿಸಿದ್ದು ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಕಾಡುತ್ತಿರುವ ಬಯಲು ಬಹಿರ್ದೆಸೆ ಸಮಸ್ಯೆ. ಇದನ್ನೇ ‘ಮರ್ಯಾದೆ ಮನೆ’ ಕಿರುಚಿತ್ರದಲ್ಲಿ ಅನಾವರಣಗೊಳಿಸಿದ್ದಾರೆ.

ಚಿತ್ರದ ಸಂದೇಶವಿದು: ನೈಜ ಘಟನೆ ಆಧರಿಸಿ ಕಿರುಚಿತ್ರ ನಿರ್ವಿುಸಲಾಗಿದೆ. ಅವಿಭಕ್ತ ಕುಟುಂಬದಲ್ಲಿ ಮನೆ, ಹೊಲ ಎಲ್ಲ ಇದ್ದರೂ ಶೌಚಗೃಹ ಮಾತ್ರ ಇರುವುದಿಲ್ಲ, ಇಂತಹ ಮನೆಯಲ್ಲಿ ಒಂದು ದಿನ ಎಲ್ಲರೂ ಹೊಲಕ್ಕೆ ಹೋದ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿರುವ ಮನೆಯ ಸೊಸೆ ಬಯಲು ಶೌಚಕ್ಕೆ ಹೋಗಬೇಕಾಗುತ್ತದೆ. ಆಗ ಏನೋ ತೊಂದರೆಯಾಗಿ ನೆಲಕ್ಕೆ ಬೀಳುತ್ತಾಳೆ. ಆಗ ಅಲ್ಲಿಯೇ ಅವಳಿಗೆ ಹೆರಿಗೆಯಾಗಿ ಮೂರ್ಛೆ ಹೋಗುತ್ತಾಳೆ. ಜನಿಸಿದ ನವಜಾತ ಶಿಶು ನಾಯಿಗಳ ಪಾಲಾಗುತ್ತದೆ. ಇದು ಏಕೆ ಆಯಿತು ಎಂಬುದನ್ನು ಚಿತ್ರತಂಡ ಮನಮುಟ್ಟುವಂತೆ ತೋರಿಸಿದೆ. ಈ ಮೂಲಕ ಶೌಚಗೃಹ ಅಗತ್ಯವನ್ನು ಗ್ರಾಮೀಣ ಜನರಿಗೆ ತಿಳಿಸುವ ಯತ್ನವನ್ನು ಚಿತ್ರತಂಡ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು: ಕುಂದಗೋಳ ತಾಲೂಕಿನ ಪಶುಪತಿಹಾಳ ಮತ್ತು ರಟ್ಟಿಗೇರಿ ಗ್ರಾಮಗಳಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಿಸಲಾಗಿದೆ. ಸುಮಾರು 30-35 ಸಾವಿರ ರೂ. ವ್ಯಯಿಸಲಾಗಿದೆ. ಯೂಟ್ಯೂಬ್​ನಲ್ಲಿ ಈವರೆಗೆ 3000ಕ್ಕೂ

ಅಧಿಕ ಜನ ವೀಕ್ಷಿಸಿದ್ದಾರೆ. ಫೇಸ್​ಬುಕ್, ವಾಟ್ಸ್​ಆಪ್, ಟ್ವಿಟರ್​ಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರನಟ ಗಣೇಶರಾವ್ ಕೇಸರಕರ್, ನಟಿ ಸುನಂದಾ ಕಲಬುರಗಿ ಅವರು ಕಿರುಚಿತ್ರದ ಕುರಿತು ಪ್ರೋತ್ಸಾಹಕರ ನುಡಿಗಳನ್ನಾಡಿದ್ದಾರೆ.

ಹಲವರಿಗೆ ಪ್ರೇರಣೆ

ಈ ಕಿರುಚಿತ್ರ ವೀಕ್ಷಿಸಿ ಪ್ರೇರಣೆಗೊಂಡ ಹಲವರು ಶೌಚಗೃಹ ಇಂದೇ ನಿರ್ವಿುಸಿಕೊಳ್ಳುತ್ತೇವೆ ಎಂದು ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ.

ಹಳ್ಳಿಗಳಲ್ಲಿ ರಸ್ತೆಗಳ ಬದಿಯಲ್ಲಿ ಇಲ್ಲವೇ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಬಹಿರ್ದೆಸೆ ಇಂದಿಗೂ ಬೇರೂರಿದೆ. ಇದರಿಂದ ಆರೋಗ್ಯದ ಮೇಲಾಗುವ ಹಾನಿ, ಅದರಲ್ಲೂ ಗರ್ಭಿಣಿಯರು, ವೃದ್ಧರು ಅನುಭವಿಸುವ ಸಮಸ್ಯೆಗಳನ್ನು ಕಿರುಚಿತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಪ್ರತಿಯೊಬ್ಬರೂ ಜಾಗ್ರತರಾಗಿ ಶೌಚಗೃಹ ನಿರ್ವಿುಸಿಕೊಂಡು ಆರೋಗ್ಯ ಸಮಾಜಕ್ಕೆ ಕೈಜೋಡಿಸಬೇಕು.| ಬಸವರಾಜ ಬಿಡ್ನಾಳಕಿರುಚಿತ್ರ ನಿರ್ದೇಶಕ

20-25 ಸಾವಿರ ರೂ. ನೀಡಿ ದುಬಾರಿ ಮುಖಬೆಲೆಯ ಮೊಬೈಲ್​ಫೋನ್ ಖರೀದಿಸಿ ಶೋಕಿ ಮಾಡುತ್ತೇವೆ. ಆದರೆ, ನಮ್ಮನೆಯ ಹೆಣ್ಣುಮಕ್ಕಳೂ ರಸ್ತೆ ಬದಿ ಶೌಚಕ್ಕೆ ಹೋದರೂ ಅದರ ಬಗೆಗೆ ಚಿಂತಿಸಲ್ಲ. ಈ ಕುರಿತು ‘ಮರ್ಯಾದೆ ಮನೆ’ ಕಿರುಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.| ಬಸವಣ್ಣಜ್ಜ ಕಲ್ಯಾಣಪೂರಮಠ ಕುಂದಗೋಳ

ಕಿರುಚಿತ್ರ ವೀಕ್ಷಿಸಿದ್ದೇನೆ. ಬಯಲು ಶೌಚ ದಿಂದಾಗುವ ತೊಂದರೆಗಳನ್ನು ಕಿರುಚಿತ್ರ ತಂಡ ಎಲ್ಲರಿಗೂ ಮನಮುಟ್ಟುವಂತೆ ಮಾಡಿದೆ. ಮತ್ತಷ್ಟು ಸಮಾಜಮುಖಿ ಚಿತ್ರಗಳು ಹೊರಬರಬೇಕು. ಎಲ್ಲ ಕಲಾವಿದರ ಬೆಳವಣಿಗೆಗೆ ಬೇಕಾದ ಸಹಾಯ - ಸಹಕಾರ ನೀಡಲು ಬದ್ಧ.| ಎ.ಬಿ. ಉಪ್ಪಿನ, ಅಧ್ಯಕ್ಷ ಕೆಎಲ್​ಇ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಂಶಿ

ಹೀಗಿದೆ ತಾರಾ ಬಳಗ

ಚಿತ್ರ ತಂಡದಲ್ಲಿ ಸಂಶಿ ಗ್ರಾಮದ ಬಸವರಾಜ ಬಿಡ್ನಾಳ ಕಥೆ ಬರೆದು ನಿರ್ದೇಶಿಸಿದ್ದಾರೆ. ಶಾಂತಾ ಬಿಡ್ನಾಳ, ರೇಖಾ ಡೇಕಣಿ ಮತ್ತು ನಂದಿನಿ ಎಚ್. ನಿರ್ವಣದ ಜವಾಬ್ದಾರಿ ಹೊತ್ತಿದ್ದರು. ಕಥೆ-ಸಂಭಾಷಣೆ- ಸಿದ್ದುಕೃಷ್ಣ, ಛಾಯಾಗ್ರಹಣ- ವಂದೇ ಮಾತರಂ ಮುತ್ತು, ಸಂಗೀತ ಸಂಕಲನ- ಶಿವಶರಣ ಸುಗ್ನಳ್ಳಿ, ವಸ್ತ್ರಾಲಂಕಾರ- ಮಂಜುನಾಥ ಹನಸಿಯವರ, ಕವಿತಾ ಮಾಂಡ್ರೆ- ಪ್ರಸಾದನ ಮಾಡಿದ್ದಾರೆ. ಗೋವಿಂದರಾವ್ ಮಾಂಡ್ರೆ, ಎಚ್. ಬಸವಂತ, ಪ್ರಭುಗೌಡ ಯಕ್ಕಿಕೊಪ್ಲ, ಈರಣ್ಣ ಹಡಪದ, ವೀರನಗೌಡ ಹೊಸಮನಿ, ನಿಂಗಪ್ಪ ಕಚೇರಿ, ಗೌರಮ್ಮ ಮಠಪತಿ, ಸಹನಾ ನವಲೆ, ಟಿ. ನಿವೇದಿತಾ, ಲಕ್ಷ್ಮೀ ತಳವಾರ, ಆದರ್ಶ, ಶಕ್ತಿಪ್ರಸಾದ ಸೇರಿ 15ಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net