

ಹೊನ್ನಾವರ: ಹೆದ್ದಾರಿಯ ಪಕ್ಕ ಗೂಡಂಗಡಿ ಇಟ್ಟುಕೊಂಡ ದುಡಿಯುವ ಕುಟುಂಬವೊಂದು ಶಹರಕ್ಕೆ ಶ್ರದ್ಧಾಂಜಲಿ ವಾಹನ ಕೊಡುಗೆ ನೀಡಿ ಮಾದರಿಯಾಗಿದೆ.
ಅಶೋಕ ಜಾದೂಗಾರ ಅವರು ಶಾಲೆ, ಕಾಲೆಜ್‌ಗಳಲ್ಲಿ ಜಾದೂ ಪ್ರದರ್ಶನ ಮಾಡುತ್ತಾರೆ. ನಂತರ ಉಳಿದ ವೇಳೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆ ಸಮೀಪ ಹೆದ್ದಾರಿ ಪಕ್ಕದಲ್ಲಿರುವ ಯಕ್ಷಲೋ ಫಾಸ್ಟ್ಪುಡ್ ಎಂಬ ಗೂಡಂಗಡಿಯಲ್ಲಿ ಪತ್ನಿ, ಮಗ ಶ್ರೀ ರಾಮ ಜತೆ ಭಜೆ, ಮಿರ್ಚಿ, ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದಾರೆ. ತಮ್ಮ ದುಡಿಮೆಯ ಹಣವನ್ನು ಒಟ್ಟುಗೂಡಿಸಿ ಶ್ರದ್ಧಾಂಜಲಿ ವಾಹನ ಖರೀದಿಸಿ ಶಹರದ ಜನರಿಗೆ ಕೊಡುಗೆಯಾಗಿ ನೀಡಿದ್ದಾರೆ.
9 ಲಕ್ಷ ವೆಚ್ಚದಲ್ಲಿ ಶ್ರದ್ಧಾಂಜಲಿ ವಾಹನವನ್ನು ಅವರು ಸಿದ್ಧ ಮಾಡಿದ್ದಾರೆ. ವಾಹನದಲ್ಲಿ ಶವ ಇಡಲು ಸ್ಟ್ರೇಚೆರ್, ಬಿದಿರು, ಮಡಿಕೆ, ಪಾಮ್ ಆಯ್ಲ್, ಬಟ್ಟೆ, ಕರ್ಪೂರ, ಮುಂತಾದ ವ್ಯವಸ್ಥೆ ಇಡಲಾಗಿದೆ. ಮಾತ್ರವಲ್ಲ ಸುತ್ತಲೂ ಗ್ಲಾಸ್ ಅಳವಡಿಸಿ ಶವ ಕಾಣುವ ವ್ಯವಸ್ಥೆ ಮಾಡಲಾಗಿದೆ.
ನಾನು ಅಂಗಡಿಯಲ್ಲಿರುವಾಗ ಹಲವರು ಸ್ಮಶಾನಕ್ಕೆ ಶವಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೊತ್ತು ಹೋಗುವುದು ಕಾಣುತ್ತಿತ್ತು. ಜನರ ಅಂತಿಮ ಯಾತ್ರೆ ಸುಗಮವಾಗಿರಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿದ್ದೇನೆ. ಇದನ್ನು ಯಾವುದೇ ಲಾಭದ ಉದ್ದೇಶದಿಂದ ಮಾಡಿಲ್ಲ. ಇದರಲ್ಲಿ ಒಂದು ಹುಂಡಿ ಇಡುತ್ತೇವೆ. ಜನ ಅದರಲ್ಲಿ ಹಣ ಹಾಕಬಹುದು. ಅದನ್ನೇ ವಾಹನ ನಿರ್ವಹಣೆಗೆ ಬಳಸುತ್ತೇವೆ ಎಂಬುದು ಅಶೋಕ ಜಾದೂಗಾರ ಅವರು ತಿಳಿಸಿದರು.
ಲೋಕಾರ್ಪಣೆ:
ಶುಕ್ರವಾರ ಶ್ರದ್ಧಾಂಜಲಿ ವಾಹನ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ಶರಾವತಿ ಸರ್ಕಲ್‌ನಲ್ಲಿ ನಡೆಯಿತು. ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಲೋಕಾರ್ಪಣೆ ಮಾಡಿದರು. ಪತ್ರಕರ್ತ ಜಿ.ಯು.ಭಟ್, ಉದ್ಯಮಿ ಮಂಜುನಾಥ ನಾಯ್ಕ, ಸಂದೀಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಪ ತೆಂಗೇರಿ, ರಾಜು ಮಾಸ್ತಿಹಳ್ಳ, ತುಕಾರಾಮ ನಾಯ್ಕ, ಮೀನುಗಾರ ಮುಖಂಡ ಉಮೇಶ ಮೇಸ್ತ, ಮಂಗಲದಾಸ ನಾಯ್ಕ ಮತ್ತಿತರರು ಇದ್ದರು.
ಇದನ್ನೂ ಓದಿ: ಚಿರತೆ ಉಗುರು ಸಂಗ್ರಹಿಸಿಟ್ಟ ಐವರ ಬಂಧನ