

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಂದ ಐಟಿ ಕಂಪನಿಗಳು ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊರವರ್ತುಲ ರಸ್ತೆಗಳ ಕಂಪನಿಗಳ ಅಸೋಸಿಯೇಷನ್ನಿಂದ ಪತ್ರ ಬರೆದು, ಬೆಂಗಳೂರಿಂದ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.
ಆ.30ರಂದು ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಮಳೆಯ ಪರಿಣಾಮ ಐಟಿ ಕಂಪನಿಗಳ ಒಳಭಾಗದಲ್ಲಿ ನೀರು ಬಂದಿತ್ತು. ಐದು ಗಂಟೆ ಕಾಲ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದರು. ಇವೆಲ್ಲದರ ಪರಿಣಾಮ ಒಂದೇ ದಿನ 255 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈ ಹೊರವರ್ತುಲ ರಸ್ತೆಯ ಕಳಪೆ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮಳೆ ಬಂದಾಗ ಆಗುವ ಅವಾಂತರ ಹೆಚ್ಚುತ್ತಲೇ ಇದೆ. ಇದರಿಂದ ಕಂಪನಿಗಳಿಗೆ ತೀರಾ ನಷ್ಟವಾಗುತ್ತಿದೆ ಎಂದು ಐಟಿ ಅಸೋಸಿಯೇಷನ್ ಪತ್ರ ಬರೆದಿದೆ.
ಶೇ.32% ಬೆಂಗಳೂರಿನ ಆದಾಯದ ತೆರಿಗೆ ಈ ಭಾಗದ ಐಟಿ ಕಂಪನಿಗಳು ಪಾವತಿ ಮಾಡುತ್ತಿವೆ. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರಂವರೆಗೆ 17 ಕಿ.ಮೀ. ಅಂತರದಲ್ಲಿ ಅನೇಕ ಐಟಿ ಕಂಪನಿಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.
2019ರಲ್ಲಿ ಸಿಎಂ ಭೇಟಿ ನೀಡಿ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ದರು. ಇದುವರೆಗೆ ಅದು ಈಡೇರಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ. ಐಟಿ ಕಾರಿಡಾರ್ನಲ್ಲಿ ಯಾವ ಮೂಲಭೂತ ಸೌಕರ್ಯಗಳ ಕೊಡಲಾಯಿತು? ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಆಗ್ರಹಿಸಲಾಗಿದೆ.
ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಯಾವುದು? ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿದೆ? ಎಂದು ಪ್ರಶ್ನಿಸಿರುವ ಐಟಿ ಅಸೋಸಿಯೇಷನ್, ಸಮಸ್ಯೆಗಳಿಗೆ ಬ್ರೇಕ್ ಹಾಕದಿದ್ದಲ್ಲಿ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಬಂಡವಾಳ ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ.
ಒಂದು ವೇಳೆ ಐಟಿ ಕಂಪನಿಗಳು ಹೊರ ಹೋದರೆ ಬೆಂಗಳೂರಿನ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳುವುದಂತೂ ಸತ್ಯ.