ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳಿಗೆ ಶಾಕ್

11 smg 8
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್‌ಪಿ ಬಾಲರಾಜ್, ಸಿಪಿಐ ಅಂಜನ್‌ಕುಮಾರ್ ಮುಂತಾದವರು ರೌಡಿ ಶೀಟರ್‌ಗಳ ಮನೆಗೆ ತೆರಳಿ ಎಚ್ಚರಿಕೆ ನೀಡಿದರು.
Published on

ಶಿವಮೊಗ್ಗ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ರೌಡಿಶೀಟರ್‌ಗಳ ಮನೆಗಳ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ 7 ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳ ಮೂಲಕ ದಾಳಿ ನಡೆಸಲಾಯಿತು. ಒಟ್ಟು 241 ರೌಡಿಗಳ ಮನೆಗಳ ಬಾಗಿಲು ಬಡಿದ ಪೊಲೀಸರು ಹಬ್ಬಗಳ ವೇಳೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಎಸ್ಪಿ ಜಿ.ಕೆ ಮಿಥುನ್ ಕುಮಾರ್ ನೇತೃತ್ವದಲ್ಲಿ, ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್ಪಿ ಬಾಲರಾಜ್, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಎಂ.ಸುರೇಶ್, ಭದ್ರಾವತಿ ಉಪ ವಿಭಾಗದಲ್ಲಿ ಪೊಲೀಸ್ ಉಪಾಧೀಕ್ಷಕ ನಾಗರಾಜ್, ಸಾಗರ ಉಪ ವಿಭಾಗದಲ್ಲಿ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ, ಶಿಕಾರಿಪುರ ಉಪ ವಿಭಾಗದಲ್ಲಿ ಡಿವೈಎಸ್ಪಿ ಶಿವಾನಂದ್ ಮದರಖಂಡಿ ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಒಳಗೊಂಡ ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದವು.
ಶಿವಮೊಗ್ಗ ಎ ಉಪ ವಿಭಾಗದಲ್ಲಿ 39, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 38, ಭದ್ರಾವತಿ ಉಪ ವಿಭಾಗದಲ್ಲಿ 72, ಸಾಗರ ಉಪ ವಿಭಾಗದಲ್ಲಿ 21, ಶಿಕಾರಿಪುರ ಉಪ ವಿಭಾಗದಲ್ಲಿ 27, ತೀರ್ಥಹಳ್ಳಿ ಉಪ ವಿಭಾಗದಲ್ಲಿ 44 ಸೇರಿ ಜಿಲ್ಲೆಯಾದ್ಯಂತ ಒಟ್ಟು 241 ರೌಡಿ ಶೀಟರ್‌ಗಳ ಮನೆಗಳನ್ನು ತಪಾಸಣೆ ನಡೆಸಿ ರೌಡಿಗಳ ಹಾಜರಾತಿ, ಹಾಲಿ ಮಾಡುತ್ತಿರುವ ಕೆಲಸ, ಮನೆಯಲ್ಲಿ ಮಾದಕ ವಸ್ತು ಹಾಗೂ ಮಾರಕಾಸಗಳನ್ನು ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಕಾರ್ಯಚಟುವಟಿಕೆಗಳ ಮಾಹಿತಿಯನ್ನೂ ಪೊಲೀಸರು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net