

ಬೆಂಗಳೂರು: ಜೆಡಿಎಸ್ ನಾಯಕರ ಜೊತೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೇ ಮತ ಹಾಕುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಮತದಾನಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಶಿವಲಿಂಗೇಗೌಡ, ನನ್ನ ಮುಂದಿನ ನಡೆ ಮೂರು ಬಾರಿ ವಿಧಾನಸಭೆಗೆ ಆಯ್ಜೆ ಮಾಡಿ ಕಳುಹಿಸಿದ ಅರಸೀಕೆರೆ ಕ್ಷೇತ್ರದ ಮತದಾರರ ನಿರ್ಧಾರಕ್ಕೆ ಬಿಟ್ಟದ್ದು. ಕ್ಷೇತ್ರದ ಜನರು ಏನು ನಿರ್ಧಾರ ತೆಗೆದುಕೊಂಡು ಹೇಳುತ್ತಾರೋ ಹಾಗೆಯೇ ಮುಂದುವರಿಯುವೆ. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಅವರಿಗೇ ಮತ ಹಾಕುವೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಸಿದ್ದರಾಮಯ್ಯ ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿ.ಟಿ.ದೇವೇಗೌಡರು ಕೂಡ ಜೆಡಿಎಸ್ಗೆ ಮತ ಹಾಕುವುದಾಗಿ ನಿನ್ನೆಯೇ ಘೋಷಿಸಿದ್ದರು. ಆದರೆ ಕೋಲಾರದ ಶಾಸಕ ಶ್ರೀನಿವಾಸ್ಗೌಡ ಅಡ್ಡ ಮತದಾನ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.