ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ... ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ

modi
Published on

ಕಿನ್ನಿಗೋಳಿ(ದ.ಕ.): ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ. ಲೋಕದ ರಕ್ಷಣೆ ಮಾಡುವ ಮಾಯೆ ನಾನು. ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ ನೀಡಿದೆ.

ಶಿಬರೂರು ಕೊಡಮಣಿತ್ತಾಯ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ದೈವಕ್ಕೆ ತುಡರಬಲಿ ಸೇವೆ ನೆರವೇರಿತು. ಪಂಜಾಬ್​ನಲ್ಲಿ ಪ್ರಧಾನಿಗೆ ಭದ್ರತಾಲೋಪ ಪ್ರಕರಣ ನಡೆಯುತ್ತಿದ್ದಂತೆ, ಅವರಿಗೆ ದೀರ್ಘಾಯುಷ್ಯ ನೀಡಲೆಂದು ಅನೇಕ ಕಡೆ ಅಭಿಮಾನಿಗಳು ಹೋಮಹವನ ನಡೆಸಿದ್ದಾರೆ. ಇಲ್ಲೂ ಮೋದಿ ಅಭಿಮಾನಿ ಶಿಬರೂರು ನಿವಾಸಿ ತುಕಾರಾಮ ಸಾಲಿಯಾನ್​ ಅವರು ಮೋದಿ ಅವರಿಗೆ ಯಾವುದೇ ತೊಂದರೆ ಆಗಬಾರದೆಂದು ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಆ ಪ್ರಯುಕ್ತ ಭಾನುವಾರ ರಾತ್ರಿ ಸೇವೆ ಸಲ್ಲಿಸಿದರು.

ನರೇಂದ್ರ ಮೋದಿಯವರು ನಿಜವಾದ ಜನನಾಯಕ, ಮೋದಿ ಪ್ರಧಾನಿಯಾದ ನಂತರ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಈ ಕಾರಣದಿಂದ ನಾನು ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದೇನೆ. ಪಂಜಾಬಿನಲ್ಲಿ ನಡೆದ ಘಟನೆ ಸಂದರ್ಭ ನನಗೆ ತುಂಬಾ ನೋವಾಗಿದ್ದು, ಮೋದಿಯವರಿಗೆ ಯಾವುದೇ ತೊಂದರೆ ಬರಬಾರದೆಂದು ಪ್ರಾರ್ಥಿಸಿ ಕೊಡಮಣಿತ್ತಾಯ ದೈವಕ್ಕೆ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಅದರಂತೆ ಸೇವೆ ಮಾಡಿದೆ ಎಂದು ತುಕಾರಾಮ ಸಾಲಿಯಾನ್​ ತಿಳಿಸಿದರು.

ಅಭಯ ನೀಡಿದ ದೈವ: ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ, ಇಡೀ ಲೋಕದ ರಕ್ಷಣೆ ಮಾಡುವ ಮಾಯೆ ನಾನು, ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತಾನೆ ಎಂದು ದೈವ ಅಭಯ ನೀಡಿತು.

ಇಲ್ಲಿನ ತೀರ್ಥ ಮತ್ತು ಮಣ್ಣಿಗೆ ವಿಷ ಹೀರುವ ಶಕ್ತಿ ಇದೆ: ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಕರಾವಳಿಯಲ್ಲಿ ಅತ್ಯಂತ ಕಾರಣಿಕದ ದೈವಸ್ಥಾನವಾಗಿದೆ. ಇಲ್ಲಿನ ಮಣ್ಣು ಮತ್ತು ತೀರ್ಥ ಅತ್ಯಂತ ಪ್ರಸಿದ್ಧಿ ಹೊಂದಿದ್ದು, ಇಲ್ಲಿನ ತೀರ್ಥ ಮತ್ತು ಮಣ್ಣಿಗೆ ವಿಷವನ್ನು ಹೀರುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ವಿಷಜಂತುಗಳು ಕಡಿದಾಗ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಬಾಯಿಗೆ ಹಾಕಿದರೆ ವಿಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಡಿಸೆಂಬರ್​ ತಿಂಗಳಲ್ಲಿ ಬರುವ ಜಾತ್ರಾಮಹೋತ್ಸವದ ಸಂದರ್ಭ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಭಕ್ತರು ಮನೆಗೆ ತೆಗೆದುಕೊಂಡು ಹೋಗಿ ಇಡುತ್ತಾರೆ. ಚರ್ಮರೋಗ, ಆರೋಗ್ಯದ ಸಮಸ್ಯೆ, ಮಕ್ಕಳಾಗದಿರುವಿಕೆ ಮತ್ತಿತರ ಸಮಸ್ಯೆಗಳ ನಿವಾರಣೆಗಾಗಿ ಭಕ್ತರು ಹರಕೆ ಹೊರುತ್ತಾರೆ. ಇಷ್ಟಾರ್ಥ ಸಿದ್ಧಿಸಿದ ಬಳಿಕ ಪ್ರತಿ ವರ್ಷ ತುಲಾಬಾರ, ಕಂಚಿಲು ಸೇವೆ, ಉರುಳು ಸೇವೆ ಮತ್ತಿತರ ಸೇವೆಗಳು ಭಕ್ತರಿಂದ ಸಂದಾಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net