

ವಿಜಯವಾಣಿ ಸುದ್ದಿಜಾಲ ವಿಜಯಪುರ
12ನೇ ಶತಮಾನದಲ್ಲಿ ಜಡ್ಡುಗಟ್ಟಿದ್ದ ಕಂದಾಚಾರ ವರ್ಣ ವ್ಯವಸ್ಥೆಯ ನಡುವೆ ವೈಚಾರಿಕ ನೆಲೆಗಟ್ಟಿನಲ್ಲಿ ನಡೆದ ಶರಣ ಚಳವಳಿಯಿಂದ ಸರ್ವ ಸಮಾನ ಸಮಾಜ ನಿರ್ಮಾಣ ಸಾಧ್ಯವಾಯಿತು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ನವರಾತ್ರಿ ಅಂಗವಾಗಿ ತಾಲೂಕು ಶಸಾಪ, ಶ್ರೀ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನಬಳಗ ಸೇವಾ ಟ್ರಸ್ಟ್, ಅರಿವಿನ ಮನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೊಂಬೆಮನೆಯಲ್ಲೊಂದು ಶರಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶರಣರಿಂದ ಸಾಮಾಜಿಕ ಚಳವಳಿ ಜತೆಯಲ್ಲಿ ಅಕ್ಷರ ಸಂಸ್ಕೃತಿ, ಪ್ರಜಾಪ್ರಭುತ್ವ ಮಾದರಿ ಪರಿಕಲ್ಪನೆಯು ಹುಟ್ಟಿಕೊಂಡಿತು. ಶರಣರಿಂದ ಕನಿಷ್ಠ ವೃತ್ತಿಗಳೂ ಜಾತಿ ನಿರ್ಧಾರಕಗಳಾಗದೆ, ಪದವಿಗಳಂತೆ ಮಾರ್ಪಟ್ಟು, ಶ್ರಮ ಸಂಸ್ಕೃತಿ ಹುಟ್ಟು ಹಾಕಲಾಯಿತು. ವಚನ ಸಂಸ್ಕೃತಿಯಲ್ಲಿನ ಮೌಲ್ಯಗಳು ಶಕ್ತಿಯಾಗಿದ್ದುದರಿಂದಲೇ ಶರಣಸಂಪ್ರದಾಯ, ವಚನಗಳು ಇನ್ನೂ ಉಳಿದು ಅನುಕರಣೀಯವಾಗಿವೆ ಎಂದರು.
ಶ್ರೀ ವೀರಭದ್ರಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ನಿಯೋಜಿತ ಅಧ್ಯಕ್ಷ ವಿ.ಅನಿಲ್‌ಕುಮಾರ್ ಮಾತನಾಡಿ, ಹಬ್ಬಗಳು ಕೇವಲ ಧಾರ್ಮಿಕ ದೃಷ್ಟಿಕೋನವನ್ನು ಹೊಂದಿರದೆ, ಕೌಟುಂಬಿಕ ವ್ಯವಸ್ಥೆಯನ್ನು ಸುಭದ್ರವಾಗಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿರುವ ಶರಣರ ವಚನಗಳು ಸುಂದರ ಜೀವನಕ್ಕೆ ದಾರಿದೀಪವಾಗಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ. ಜ್ಞಾನದ ಭಂಡಾರವಾಗಿ ಜಗತ್ತಿಗೆ ಜ್ಯೋತಿಯಾಗಿರುವ ವಚನಗಳನ್ನು ಎಲ್ಲರೂ ಓದಬೇಕು ಎಂದರು.
ತಾಲೂಕು ಶಸಾಪ ಅಧ್ಯಕ್ಷ ಮ.ಸುರೇಶ್ ಬಾಬು, ಬಾಲಗೋಕುಲದ ಕೃಷ್ಣಪ್ಪದಾಸರು, ಅಕ್ಕನ ಬಳಗದ ಉಪಾಧ್ಯಕ್ಷೆ ಅಂಬಾ ಭವಾನಿ, ಸದಸ್ಯರಾದ ವಿಮಲಾಂಬಾ, ರಾಧಾ ಮನೋಹರ್, ಮೀನಾಸುರೇಶ್, ನಾಗರತ್ನಮ್ಮ, ಮಂಜುಳಾ, ವೀಣಾ ಅವರಿಂದ ವಚನ ಗಾಯನ ನಡೆಯಿತು. ಪುರಸಭೆ ಮಾಜಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಶಿಕ್ಷಕ ಎ.ಬಿ.ಪರಮೇಶ್, ಪೂರ್ಣಿಮ ದಂಪತಿಯನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ರಾಜಶೇಖರಾಚಾರಿ. ಕೆ.ಎಚ್.ಚಂದ್ರಶೇಖರ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ದೀಪಾ ರಮೇಶ್, ಸುವರ್ಣಾ ಶಿವಕುಮಾರ್, ರಾಧಾಚಂದ್ರಪ್ಪ, ವಿಜಯಾ, ದಾಕ್ಷಾಯಿಣಮ್ಮ, ಶರ್ವಾಣಿ, ಭಾಗ್ಯಾ, ಪರಿಣಿತಾ, ಮ.ಸುರೇಶ್‌ಬಾಬು ಮತ್ತಿತರರು ಇದ್ದರು.