ಸಹಕಾರ ನೀಡದಿದ್ದರೆ ಗಂಭೀರ ಅಪಾಯ

30 NRD-1
Published on

ನರಗುಂದ: ಗದಗ ಜಿಲ್ಲಾದ್ಯಂತ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಸಾವುಗಳು ಸಂಭವಿಸುತ್ತಿವೆ. ಸಾರ್ವಜನಿಕರು ಲಾಕ್​ಡೌನ್​ಗೆ ಸಹಕಾರ ನೀಡದಿದ್ದರೆ ಗಂಭೀರ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಸ್ಪಿ ಎನ್. ಯತೀಶ ಹೇಳಿದರು.
ನರಗುಂದ ಪೊಲೀಸ್ ಠಾಣೆಗೆ ಭಾನುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕರೊನಾ ತಡೆಗಟ್ಟಲು ಪ್ರತಿಯೊಬ್ಬರ ಸಹಾಯ, ಸಹಕಾರ ಬೇಕು. ನರಗುಂದ ಠಾಣೆ ಪೊಲೀಸರು 24 ತಾಸು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 5 ದಿನಗಳಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ 47 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 57 ಬೈಕ್​ಗಳನ್ನು ಸೀಜ್ ಮಾಡಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಹದಲಿ, ಚಿಕ್ಕನರಗುಂದ, ರಡ್ಡೇರನಾಗನೂರ ಗ್ರಾಮಗಳ ಜಾತ್ರೆಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಉಡಿ ತುಂಬುವ ಧಾರ್ವಿುಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಕರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಸರ್ಕಾರದ ಆದೇಶ ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಆರೋಗ್ಯದ ಹಿತದೃಷ್ಟಿಯಿಂದ ನರಗುಂದ ಪೊಲೀಸ್ ಠಾಣೆ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಬೇಕು. ಮಾನವೀಯತೆ ಆಧಾರದಡಿ ಬಂದೋಬಸ್ತ್ ಕೈಗೊಳ್ಳಬೇಕು. ತಾಲೂಕಿನಲ್ಲಿ ನಿರ್ಗತಿಕರಿಗೆ, ಅಸಹಾಯಕರಿಗೆ ಪೊಲೀಸ್ ಠಾಣೆಯಿಂದ ಕಿಟ್ ಅಥವಾ ದಾಸೋಹ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಜನರು ವಿನಾಕಾರಣ ಗುಂಪು ಗುಂಪಾಗಿ ಕುಳಿತುಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ರೈತರ ವಿವಿಧ ಕೃಷಿ ಚಟುವಟಿಕೆಗೆ ಸರ್ಕಾರದಿಂದ ಯಾವುದೇ ನಿರ್ಬಂಧವಿಲ್ಲ ಎಂದರು.
ಡಿವೈಎಸ್ಪಿ ಶಂಕರ ಎಂ. ರಾಗಿ, ಸಿಪಿಐ ನಂದೀಶ ಕುಂಬಾರ, ಎಎಸ್​ಐ ವಿ.ಜಿ. ಪವಾರ, ಬಿ.ಆರ್. ಸೊರಟೂರ, ಎಸ್.ಆರ್. ರಾಯನಗೌಡ್ರ, ಬಿ.ಆರ್. ಸುರೇಬಾನ, ಉಮೇಶ ಸುಣಗಾರ, ಮುತ್ತು ಬಾರಕೇರ, ಎಸ್.ಎಸ್. ಕಾಶಪ್ಪನಮಠ, ಹುಲ್ಲಪ್ಪ, ಸಂತೋಷ ಡೋಣಿ, ವೀರೇಶ ಕಟ್ಟಿಮನಿ, ಕೆ.ಟಿ. ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net