

ಸಾಗರ: ಇಲ್ಲಿನ ಸ್ಪಂದನ ರಂಗ ಸಂಸ್ಥೆಯಿಂದ ಆ.8ರಿಂದ 11ರವರೆಗೆ ಶಿವಪ್ಪನಾಯಕ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ನಡೆ ಶಾಲೆ ಕಡೆ ಯೋಜನೆಯಡಿ ಧೀಮ್ ಸಾಲೆ ಧಿಮ್ ಮಕ್ಕಳ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಎಂ.ವಿ.ಪ್ರತಿಭಾ ಹೇಳಿದರು.
ಆ.8ರಂದು ಬೆಳಗ್ಗೆ 10ಕ್ಕೆ ಶಾಲಾ ಆವರಣದಲ್ಲಿ ಸಾಹಿತಿ ಡಾ. ನಾ.ಡಿಸೋಜ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಬಿಇಒ ಪರಶುರಾಮ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಶಿಕ್ಷಕಿ ಶಬೀನಾ ಬೇಗಂ, ಎಸ್‌ಡಿಎಂಸಿ ಅಧ್ಯಕ್ಷ ಶಫಿವುಲ್ಲಾ ಪಾಲ್ಗೊಳ್ಳುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ 1 ರಿಂದ 6ನೇ ತರಗತಿವರೆಗಿನ 46 ಮಕ್ಕಳಿಗೆ ನಾಟಕ, ನೃತ್ಯ, ಹಾಡು, ಕಥೆ ಇನ್ನಿತರೆ ವಿಷಯಗಳ ಕುರಿತು ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಎರಡನೇ ವಿಭಾಗದ ತರಬೇತಿಯನ್ನು ಸಿದ್ದೇಶ್ವರ ಶಾಲೆಯಲ್ಲಿ, ನಂತರ ತುಮರಿ ಮತ್ತು ಬ್ರಾಹ್ಮಣ ಕೆಪ್ಪಿಗೆಯಲ್ಲಿ ಹಮ್ಮಿಕೊಳ್ಳಲಾಗುವುದು. ಪ್ರಮುಖವಾಗಿ ಸರ್ಕಾರಿ ಶಾಲೆಯಲ್ಲಿ ತಲಾ 30 ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ ಉದ್ದೇಶ ನಮ್ಮದಾಗಿದೆ. 2024ರ ಜನವರಿವರೆಗೆ ನಿರಂತರವಾಗಿ ಸರ್ಕಾರಿ ಶಾಲೆಗಳಲ್ಲಿ ಸರಣಿ ರಂಗ ತರಬೇತಿ ಶಿಬಿರ ನಡೆಸಲಾಗುವುದು ಎಂದರು.
ಸ್ಪಂದನ ಸಂಸ್ಥೆಯ ಭೂಮಿ ಇದ್ದರು.