

ಕೊಪ್ಪ: ಉದ್ಯೋಗ, ವ್ಯಾಸಂಗ ಇನ್ನಿತರ ಉದ್ದೇಶಗಳಿಗೆ ಹೊರ ದೇಶಗಳಿಗೆ ತೆರಳಿರುವ ಅನಿವಾಸಿ ಭಾರತಿಯರಿಗಾಗಿ ರಾಜ್ಯಸರ್ಕಾರ ಹೊಸ ಸಚಿವಾಲಯ ತೆರೆಯುವ ಚಿಂತನೆ ನಡೆಸಿ, ಪ್ರಕ್ರಿಯೆ ಆರಂಭಿಸಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಅರತಿ ಕೃಷ್ಣ ತಿಳಿಸಿದರು.
ಹೊರ ದೇಶಗಳಲ್ಲಿ ಸುಮಾರು 18 ಕೋಟಿಯಷ್ಟು ಜನರು ವಿದೇಶದಲ್ಲಿದ್ದಾರೆ. ನಮ್ಮ ಸಮಿತಿಯಿಂದ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಇದಕ್ಕೆ ರಾಜ್ಯದಲ್ಲಿ ಸಚಿವಾಲಯ ಆರಂಭಗೊಂಡಲ್ಲಿ ಹೊರ ದೇಶದ ಕನ್ನಡಿಗರಿಗೆ ಒಂದು ಭದ್ರತೆ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಕೇರಳ ಸಚಿವಾಲಯ ತೆರೆದಿದೆ. ತಮಿಳನಾಡು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪಂಜಾಬ್‌ಸರ್ಕಾರ ಇಲಾಖೆ ಹೊಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2016ರಲ್ಲಿ ಸಿದ್ದರಾಯಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವಾಲಯ ಆರಂಭಿಸುವ ಪ್ರಕ್ರಿಯೆ ಆರಮಭವಾಗಿತ್ತು. ಆ ನಂತರ ಚುನಾವಣೆ ಕಾರಣ ಹಾಗೇ ಉಳಿದಿತ್ತು. ಈಗ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಈ ಪ್ರಕ್ರಿಯೆಗೆ ವೇಗ ದೊರಕಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವಿದೇಶದಲ್ಲಿ ಸಮಸ್ಯೆಯಾದಲ್ಲಿ ಪರಿಹಾರ ಕಲ್ಪಿಸುವ ಯೋಜನೆ ಇದೆ ಎಂದರು.
ಸಮಿತಿಯಿಂದ ಹೊರ ದೇಶದ ಕನ್ನಡ ಸಂಘಟನೆಗಳಿಗೆ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುತ್ತಿದೆ. ಸಮಸ್ಯೆಯಲ್ಲಿರುವ ಕನ್ನಡಿಗರನ್ನು ವಿದೇಶದಿಂದ ಯಾವುದೇ ಸಮಸ್ಯೆ ಇಲ್ಲದೇ ಕರೆ ತರುವ ಪ್ರಯತ್ನ ಮಾಡಲಾಗಿದೆ. ವಿದೇಶಗಳಿಗೆ ಉದ್ಯೋಗದ ನಿಮಿತ್ತ ತೆರಳುವ ಕನ್ನಡಿಗರು ಯಾವುದೇ ರೀತಿಯಲ್ಲಿ ಮೋಸ ಹೋಗಬಾರದು, ಏಜೆಂಟ್‌ಗಳನ್ನು ನಂಬಿ ಹಣ ನೀಡಬಾರದು, ವಿದೇಶದಲ್ಲಿನ ಉದ್ಯೋಗದ ಬಗ್ಗೆ ಮೊದಲೇ ತಿಳಿವಳಿಕೆ ಹೊಂದಬೇಕು. ಅನುಮಾನಗಳು ಇದ್ದಲ್ಲಿ ನಮ್ಮ ಕಚೇರಿ ಸಂರ್ಪಕಿಸ ಬಹುದು ಎಂದರು.