ಹೂಗಾರರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ

05-11-Shiva-6
ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹೂಗಾರ ಸಮಾಜ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಹೂಗಾರ ಮಾದಯ್ಯ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯ ನಾಯಕ, ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ, ಪದಾಕಾರಿಗಳಾದ ಉಗ್ರನರಸಿಂಹಪ್ಪ ಹೂಗಾರ, ಲೋಚನೇಶ ಹೂಗಾರ, ವೆಂಕಟೇಶ ಹೂಗಾರ, ವಿಶ್ವನಾಥ ಹೂಗಾರ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ಸಿರವಾರ ಇದ್ದರು.
Published on

ರಾಯಚೂರು: ಹೂಗಾರರ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಚರ್ಚಿಸಲು ಸಭೆ ನಿಗದಿಪಡಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹೂಗಾರ ಸಮಾಜ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲ ಸಮುದಾಯಗಳೊಂದಿಗೆ ಒಗ್ಗೂಡಿ ಸಹಬಾಳ್ವೆ ನಡೆಸುವ ಹೂಗಾರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಹೂಗಾರ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ಸಂಬಂಸಿದಂತೆ ಇರುವ ತೊಡಕುಗಳ ಕುರಿತು ಮುಂಬರುವ ದಿನಗಳಲ್ಲಿ ತಜ್ಞರ ಜತೆಗೆ ಚರ್ಚಿಸಲಾಗುವುದು. ತಸ್ತಿಕ್ ಭತ್ಯೆ ಹಾಗೂ ಹೂಗಾರ ಮಾದಯ್ಯರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಕುರಿತು ಸೂಕ್ತ ನಿರ್ಧಾರ ಕೈಕೊಳ್ಳಲಾಗುವುದು ಎಂದು ಹೇಳಿದರು.
ಮಾನ್ವಿ ಶಾಸಕ ಹಂಪಯ್ಯ ನಾಯಕ ಮಾತನಾಡಿ, ಹೂವಿನಂತೆ ಮೃದು ಮನಸ್ಸಿನ ಹೂಗಾರರಿಗೆ ಆರ್ಥಿಕ, ಸಾಮಾಜಿಕ ಉನ್ನತಿಗೆ ಅನುಕೂಲವಾಗುವಂತೆ ಇತರ ಸಮುದಾಯಗಳಂತೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮಂಗಳವಾರಪೇಟೆ ಹಿರೇಮಠದ ವೀರ ಸಂಗಮೇಶ್ವರ ಸ್ವಾಮೀಜಿ ಮತನಾಡಿ, ಸಮುದಾಯದ ಏಳಿಗೆಗಾಗಿ ಸಂಘಟಕರು ಪಡುವ ಪರಿಶ್ರಮಕ್ಕೆ ಸಮುದಾಯದ ಎಲ್ಲರೂ ಬೆನ್ನಿಗೆ ನಿಲ್ಲಬೇಕು. ಸಮಾಜದಲ್ಲಿನ ಒಗ್ಗಟ್ಟು ಇತರ ಸಮುದಾಯಗಳಿಗೆ ಮಾದರಿಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ 70ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಇದಕ್ಕೂ ಮುಂದೆ ಸೋಮವಾರಪೇಟೆ ಹಿರೇಮಠದಿಂದ ಕಲ್ಯಾಣ ಮಂಟಪದವರೆಗೆ ಕಲಾತಂಡಗಳೊಂದಿಗೆ ಹೂಗಾರ ಮಾದಯ್ಯ ಭಾಗಚಿತ್ರ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಕೇದಾರನಾಥ ಹೂಗಾರ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯ್ಕಷ ಕೆ.ಶಾಂತಪ್ಪ, ಸಂಘದ ಪದಾಕಾರಿಗಳಾದ ಉಗ್ರನರಸಿಂಹಪ್ಪ ಹೂಗಾರ, ಲೋಚನೇಶ ಹೂಗಾರ, ವೆಂಕಟೇಶ ಹೂಗಾರ, ವಿಶ್ವನಾಥ ಹೂಗಾರ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ಸಿರವಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net