ಯಾವದೇ ಕೆಲಸಕ್ಕೂ ಸೇವಾಭಾವ ಮುಖ್ಯ: ಮಹಾಮೇದಾನಂದ ಸ್ವಾಮೀಜಿ ಅಭಿಮತ

20
Published on

ಮೈಸೂರು: ಅಡುಗೆಯವರು, ಹಾಸ್ಟೆಲ್ ವಿದ್ಯಾರ್ಥಿಗಳು ನಿಮ್ಮ ಮಕ್ಕಳೆಂದು ತಿಳಿದು ಜಾಗರೂಕತೆಯಿಂದ ಶಿವ ಮೆಚ್ಚುವ ಹಾಗೆ ಕೆಲಸ ಮಾಡಬೇಕು ಎಂದು ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಸಂಚಾಲಕ ಸ್ವಾಮಿ ಮಹಾಮೇದಾನಂದ ಸ್ವಾಮೀಜಿ ತಿಳಿಸಿದರು.

ನಗರದ ಯಾದವಗಿರಿಯಲ್ಲಿರುವ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿರುವ ಅಡುಗೆಯವರು, ಅಡುಗೆ ಸಹಾಯಕರು, ಕಿರಿಯ ನಿಲಯ ಮೇಲ್ವಿಚಾರಕರು, ನಿಲಯ ಮೇಲ್ವಿಚಾರಕರು, ನಿಲಯ ಪಾಲಕರುಗಳಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದಾದರೂ ಆಗಲಿ ಕೆಲಸವನ್ನು ಸೇವಾ ಮನೋಭಾವದಿಂದ ನಿಯತ್ತಾಗಿ ಮಾಡಬೇಕು. ದೊಡ್ಡತನ ದೊಡ್ಡ ವ್ಯಕ್ತಿತ್ವ ಹೊಳೆಯುವುದು ಅವರು ಮಾಡುವ ಕೆಲಸದಿಂದ, ಸಮಾಜದಿಂದ ನಾವೆಲ್ಲಾ ಎಷ್ಟೊಂದು ಪಡೆದುಕೊಂಡಿದ್ದೇವೆ. ಕೆಲಸ ನಮಗೆ ಸಿಕ್ಕಿರುವ ಜವಾಬ್ದಾರಿ ಎಂದು ತಿಳಿದುಕೊಂಡು ಪ್ರೀತಿಯಿಂದ ಮಾಡಿದಾಗ ಪರಮಾತ್ಮ ಮೆಚ್ಚಿಕೊಳ್ಳುತ್ತಾನೆ. ಸಂಸ್ಥೆಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.

ಬೂಟಾಟಿಕೆಯನ್ನು ಭಗವಂತ ಕ್ಷಮಿಸುವುದಿಲ್ಲ. ನಾವು ಸತ್ಯ ಪರಿಪಾಲನೆ ಮಾಡಬೇಕು. ನೀವು ಸಮಾಜಕ್ಕೆ ಏನು ಕೊಡುತ್ತೀರೋ ಅದಕ್ಕೆ ನೂರು ಪಟು ್ಟವಾಪಸ್ ಬರುತ್ತದೆ. ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿದೆ. ಸ್ವಾರ್ಥ, ಅಹಂಕಾರ ಬಿಟ್ಟು ದೇವರ ಹೆಸರು ಹೇಳಿಕೊಂಡು ಮಕ್ಕಳಿಗೆ ಒಳ್ಳೆಯದಾಗಲೆಂದು ಕೆಲಸ ಮಾಡಿದರೆ ನಿಮಗೂ ಒಳ್ಳೆಯದಾಗುತ್ತದೆ ಎಂದರು.

ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಸ್ವರ್ಣಲತಾ, ಚಂದ್ರಕಲಾ, ಸುಜೇಂದ್ರಕುಮಾರ್, ಕೃಷ್ಣೇಗೌಡ, ಶಶಿಕಲಾ ಪ್ರೇಮಕುಮಾರ್, ಸುಕನ್ಯಾ, ರಾಜಣ್ಣ ಮೇಘನಾ, ಸತೀಶ್, ಅರುಣ್ ಕುಮಾರ್, ಮಹಾಲಕ್ಷ್ಮಿ, ಜಗದೀಶ್, ಕೋರಿ, ಪರಶುರಾಂ, ನಿಲಯಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net