

ನರೇಗಲ್ಲ: ದೇವರ ದರ್ಶನ ನಮ್ಮಲ್ಲೊಂದು ನೆಮ್ಮದಿಯ ಭಾವ ತರುತ್ತದೆ. ದೇವಸ್ಥಾನ ಭೇಟಿಯಿಂದ ಆರೋಗ್ಯಕ್ಕೂ ಪ್ರಯೋಜನಗಳಿವೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಂತೆ ಬಜಾರದ ಶ್ರೀ ಕಟ್ಟಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ಗೋಪುರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದೇಗುಲದ ಪ್ರಾಂಗಣದ ಧನಾತ್ಮಕ ಶಕ್ತಿ ಸಕಾರಾತ್ಮಕ ಅಲೆ ಸೃಷ್ಟಿಸುತ್ತದೆ. ಇಂದಿನ ಯಾಂತ್ರಿಕೃತ ಜೀವನ ಶೈಲಿಯಲ್ಲಿ ಧಾರ್ಮಿಕ ಆಚರಣೆಗಳು ಬಹಳಷ್ಟು ಮಹತ್ವ ಪಡೆದಿವೆ ಎಂದರು.
ಹಂಪಸಾಗರ ನವಲಿಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, 115 ವರ್ಷಗಳ ಇತಿಹಾಸ ಹೊಂದಿರುವ ಕಟ್ಟಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಮೂಲಕ ಭಕ್ತಾದಿಗಳು ಪುಣ್ಯ ಪ್ರಾಪ್ತಿ ಮಾಡಿದ್ದೀರಿ ಎಂದರು.
ರುದ್ರಮುನಿ ಹಿರೇಮಠ, ವೀರಭದ್ರಯ್ಯ ಹಿರೇಮಠ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉಮೇಶ ಸಂಗನಾಳಮಠ, ಕಲ್ಮೇಶ ತೊಂಡಿಹಾಳ, ಎಂ.ಕೆ. ಬೇವಿನಕಟ್ಟಿ, ಉಡಚಪ್ಪ ತಳವಾರ, ವೀರಣ್ಣ ಗುಜಮಾಗಡಿ, ಪರಪ್ಪ ಬೆಡಗಲ್ಲ, ಸೋಮನಾಥ ಸಂಗನಾಳಮಠ, ಪ್ರಕಾಶ ಪಾಯಪ್ಪಗೌಡ್ರ, ಅಶೋಕ ಬಾರಕೇರ ಸೇರಿದಂತೆ ಇತರರಿದ್ದರು.