

ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಸೆ.10ರಂದು ಮೈಸೂರು ವಿವಿ ಲಲಿತ ಕಲಾ ಕಾಲೇಜು ಆವರಣದಲ್ಲಿ ಮಹಿಷನ ಬಗ್ಗೆ ಬೆಳಕು ಚೆಲ್ಲುವ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ರಾಜ್ಯದ ವಿವಿಧ ಭಾಗದ ಸುಮಾರು 28 ಪ್ರಗತಿಪರ ಚಿಂತಕರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಮಹಿಷನ ಬಗ್ಗೆ ತಪ್ಪು ಕಲ್ಪನೆ ಹೊಂದಿರುವ ಇತರರು ಸಹಾ ಪಾಲ್ಗೊಳ್ಳಬಹುದಾಗಿದೆ ಎಂದು ಗುರುವಾರ ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರಗುರು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಭಾಗವಹಿಸುವರು. ಮಹಿಷ ಪುರಾಣಗಳನ್ನೂ ಮೀರಿದ ಐತಿಹಾಸಿಕ ವ್ಯಕ್ತಿಯಾಗಿದ್ದಾನೆ. ಈ ಬಗ್ಗೆ ಮಾಹಿತಿ ನೀಡುವ ಉದ್ದೇಶ ವಿಚಾರ ಸಂಕಿರಣದ್ದಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಮಹಿಷ ದಸರಾ ಆಚರಿಸಲು ಅನುಮತಿ ನೀಡುವ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ. ಈ ಹಿಂದೆ ಇದ್ದ ಅಜ್ಞಾನಿಗಳಿಂದಾಗಿ ಮಹಿಷ ದಸರಾ ಆಚರಣೆಗೆ ಅನುಮತಿ ಸಿಕ್ಕಿರಲಿಲ್ಲ. ಈ ಆಚರಣೆಗೆ ಯಾರ ಅನುಮತಿಯೂ ಬೇಕಾಗಿಲ್ಲ. ಆದರೆ ಕೇವಲ ರಕ್ಷಣೆ ದೃಷ್ಟಿಯಿಂದ ಅನುಮತಿಗಾಗಿ ಪೊಲೀಸರಿಗೆ ಪತ್ರ ನೀಡಿದ್ದೆವು. ಆದರೆ ಅವರು ಅಜ್ಞಾನಿಗಳಾಗಿದ್ದ ಕಾರಣ ನಿರಾಕರಿಸಿದ್ದರೆಂದು ಬೇಸರ ವ್ಯಕ್ತಪಡಿಸಿದರು.
ಅ.13ರಂದು ಚಾಮುಂಡಿಬೆಟ್ಟದಲ್ಲಿನ ಮಹಿಷ ಪ್ರತಿಮೆಗೆ ನೂರಾರು ಮಂದಿಯ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಲಾಗುವುದು. ಅಂದಿನ ಆಚರಣೆಗೆ ಸುಮಾರು ಏಳರಿಂದ ಎಂಟು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಹೀಗಾಗಿ ಬೆಟ್ಟದ ಮೇಲಿನ ಪ್ರತಿಮೆ ಬಳಿ ಜಾಗದ ಕೊರತೆಯುಂಟಾಗುವ ಹಿನ್ನೆಲೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಒಂದು ಕಡೆ ಕಾರ್ಯಕ್ರಮ ಆಯೋಜಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಲೇಖಕ ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ವಿಷಕಂಠು, ಶಿವಣ್ಣ, ನಂಜುಂಡಸ್ವಾಮಿ ಹಾಜರಿದ್ದರು.