

ಮೈಸೂರು: ದಲಿತರು, ಹಿಂದುಳಿದ ವರ್ಗಗಳಿಗೆ ಶಿಕ್ಷಣವೇ ಆಸ್ತಿ. ಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಅಕ್ಕ ಐಎಎಸ್ ಅಕಾಡೆಮಿಯಿಂದ ಹಮ್ಮಿಕೊಂಡಿರುವ ಸನ್ಮಾರ್ಗ ಸರ್ಕಾರಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸಿಎಲ್‌ಎಟಿ, ಎನ್‌ಇಇಟಿ, ಜೆಇಇ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸರ್ಕಾರಿ ಅಥವಾ ಅರೆಸರ್ಕಾರಿ ಹುದ್ದೆಗಳನ್ನು ಅಲಂಕರಿಸಬೇಕು. ದಲಿತರು, ಹಿಂದುಳಿದವರಿಗೆ ಅಸ್ತಿ, ಉದ್ಯಮ ಇಲ್ಲದೇ ಇರುವುದರಿಂದ ವಿದ್ಯೆ ಕಲಿಯುವುದು ಒಂದೇ ಉಳಿದಿರುವ ಮಾರ್ಗ. ಆದ್ದರಿಂದ ಎಲ್ಲರೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ನಮ್ಮ ಬೌದ್ಧಿಕ ಸಾಮರ್ಥ್ಯ ಗುರುತಿಸಿಕೊಂಡು ತರಬೇತಿ ಪಡೆಯುವ ಮೂಲಕ ನೀತಿ ರೂಪಿಸುವ ಅಥವಾ ಅಧಿಕಾರದ ಸ್ಥಾನಕ್ಕೆ ಬಂದು ಕುಳಿತುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಕಾರ್ಯಾಂಗ, ಶಾಸಕಾಂಗದ ಜತೆಗೆ ನ್ಯಾಯಾಂಗದಲ್ಲೂ ಉನ್ನತ ಹುದ್ದೆಗಳನ್ನು ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿದರೆ ಸುಲಭವಾಗಿ ಕೆಲಸ ಪಡೆಯಬಹುದು. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ನಮ್ಮನ್ನೆಲ್ಲ ಸ್ಪರ್ಧೆಗೆ ಎಸೆಯಲಾಗಿದೆ. ಇದರಲ್ಲಿ ಯಶಸ್ವಿಯಾಗಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಸ್ಪರ್ಧೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ನಮ್ಮ ಕಾಲದಲ್ಲಿ ದ್ವಿತೀಯ ಶ್ರೇಣಿಯಲ್ಲಿ ಪಾಸಾದರೂ ಹೆಮ್ಮೆಪಡುವಂತಹ ಸ್ಥಿತಿ ಇತ್ತು. ಈಗ ಅದ್ಯಾವುದಕ್ಕೂ ಸಾಲುವುದಿಲ್ಲ. ಬಹುತೇಕರು ಶೇ. 95ರಷ್ಟು ಅಂಕಗಳನ್ನು ಗಳಿಸುತ್ತಿದ್ದಾರೆ. ಅವರಿಗೆ ಪೈಪೋಟಿ ಕೊಡುವಂತಾಗಬೇಕು ಎಂದರು.
ಅಕಾಡೆಮಿ ಸಂಸ್ಥಾಪಕ ಹಾಗೂ ನಿರ್ದೇಶಕ ಶಿವಕುಮಾರ್ ಮಾತನಾಡಿ, ನಮ್ಮ ಸನ್ಮಾರ್ಗ ಉಪಕ್ರಮದಲ್ಲಿ ರಜೆ ಹಾಗೂ ಸಂಜೆ ಸಮಯದಲ್ಲಿ ಹಾಸ್ಟೆಲ್‌ಗಳಲ್ಲಿನ ಪಿಯುಸಿ ಮಕ್ಕಳಿಗೆ ತರಬೇತಿ ಕೊಡಲಾಗುವುದು. ಇದಕ್ಕಾಗಿ 50 ಮಂದಿ ಸಂಪನ್ಮೂಲ ವ್ಯಕ್ತಿಗಳು ನಿಸ್ವಾರ್ಥ ಮನೋಭಾವದಿಂದ ಕೈಜೋಡಿಸಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಲಹೆಗಾರ ಬಸವರಾಜು ದೇವನೂರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಎಸ್.ತುಕಾರಾಂ, ನಿವೃತ್ತ ಕೆಎಎಸ್ ಅಧಿಕಾರಿ ಎಸ್. ಪ್ರೇಮಕುಮಾರ್, ಬರಹಗಾರ ಶಂಕನಪುರ ಮಹಾದೇವ ಇತರರು ಇದ್ದರು.