ಸುಭದ್ರ ನೆಲೆಗಟ್ಟನ್ನು ಉಳಿಸಿಕೊಳ್ಳಬೇಕು

oplus_0
ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ರವಿಕುಮಾರ್, ಮಹೇಶ್, ದಿನೇಶ್ ಹೆರಗನಹಳ್ಳಿ, ಬಿ.ಎಚ್.ಲಕ್ಷ್ಮಣಗೌಡ, ಅನಂತ್, ಅನಿಲ್ ಇದ್ದರು.
Published on

ಹಿರೀಸಾವೆ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮರೆತರೆ ನಮ್ಮನ್ನೇ ನಾವು ಮರೆತಂತೆಯೇ ಸರಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾ.ಸೇ.ಯೋ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಿಕರು ಕಟ್ಟಿಕೊಟ್ಟಿರುವ ಸುಭದ್ರ ನೆಲೆಗಟ್ಟನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ದೇಶವು ಉತ್ತಮ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ಹೊಂದಿದ್ದು ಯುವಶಕ್ತಿಯೊಂದಿಗೆ ವಿಶ್ವಕ್ಕೆ ನಾಯಕತ್ವ ವಹಿಸುವ ಮಟ್ಟಕ್ಕೆ ಬೆಳೆದಿದೆ ಎಂದರು.

ಊರಲ್ಲಿ ದೇಗುಲ ಎಷ್ಟು ಮುಖ್ಯವೋ ಶಾಲೆ ತೆರೆಯುವುದು ಅಷ್ಟೇ ಮುಖ್ಯ. ಉತ್ತಮರೊಂದಿಗೆ ಒಡನಾಟದ ಜತೆಗೆ ಸ್ನೇಹ ಸಂಪಾದನೆ ಮಾಡಿ. ಇಲ್ಲವೇ ಪುಸ್ತಕಗಳನ್ನೇ ಸ್ನೇಹಿತರಾಗಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಸಲುವಾಗಿ ಹಿರೀಸಾವೆ ಗ್ರಾಮದ ಕೇಂದ್ರ ಭಾಗದಲ್ಲಿ ಬಾಲಕಿಯರ ಹಾಸ್ಟೆಲ್ ತೆರೆಯುವ ಉದ್ದೇಶವಿದ್ದು ಸರ್ಕಾರದ ಗಮನ ಸೆಳೆಯಲಾಗುವುದು. ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾಹಿತಿ ದಿನೇಶ್ ಹೆರಗನಹಳ್ಳಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಕಲೆ ಹಾಗೂ ಪ್ರತಿಭೆ ಇದೆ. ಆದರೆ ಹೊರ ಹಾಕಲು ಅವರಲ್ಲಿ ಅಂಜಿಕೆ ಅಥವಾ ಭಯ ಕಾಡುತ್ತಿದೆ. ಅದನ್ನೆಲ್ಲ ಬದಿಗೊತ್ತಿ ತನ್ನೊಳಗಿರುವ ಪ್ರತಿಭೆಯನ್ನು ಪ್ರದರ್ಶಿಸಿದರೆ ಮಾತ್ರ ಮುಖ್ಯ ಭೂಮಿಕೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಇದಕ್ಕೂ ಮೊದಲು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಶಾಸಕರು ನೀರೆರೆದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಪ್ರಾಂಶುಪಾಲ ಬಿ.ಎಚ್.ಲಕ್ಷ್ಮಣಗೌಡ, ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಅನಂತ್, ಸಹ ಪ್ರಾಧ್ಯಾಪಕರಾದ ಪಿ.ಬಿ.ಕುಮಾರ್, ಎಚ್.ಬಿ.ಸುನೀಲ್‌ಕುಮಾರ್, ಎನ್.ಆರ್.ಆಶಾ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್, ಪ್ರಮುಖರಾದ ಅನಿಲ್, ವಳಗೇರಹಳ್ಳಿ ಮಂಜೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net