ಹವ್ಯಕ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ ; ಅರಮನೆ ಮೈದಾನದಲ್ಲಿ ಕಳೆಗಟ್ಟಿದ ಕಾರ್ಯಕ್ರಮ

havya 1
Published on

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತೃತೀಯ ವಿಶ್ವ ಹವ್ಯಕರ ಸಮ್ಮೇಳನದ 2ನೇ ದಿನವಾದ ಶನಿವಾರ ನಾಡಿನ ವಿವಿಧೆಡೆಗಳಿಂದ ಜನಸಾಗರವೆ ಹರಿದು ಬಂದಿತ್ತು. ವಾರಾಂತ್ಯವಾದ ಕಾರಣ ನಿರೀಕ್ಷೆಯಂತೆಯೇ ಬೆಳಗ್ಗೆ 9 ಗಂಟೆಯಿಂದಲೇ ಜನರು ಆಗಮಿಸುತ್ತಿದ್ದರು.

ಪ್ರಧಾನ ವೇದಿಕೆಯಲ್ಲಿ ನಡೆಯುತ್ತಿದ್ದ ಸಮಾರಂಭ, ವಿವಿಧ ಗೋಷ್ಠಿಗಳ ಜೊತೆಗೆ ಸಮಾನಂತರ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಭಾಂಗಣದಲ್ಲೂ ಕಿಕ್ಕಿರಿದು ಜನ ಪಾಲ್ಗೊಂಡಿದ್ದರು. ಇನ್ನೊಂದೆಡೆ ಪುಸ್ತಕ ಮತ್ತಿತರ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತಮಗಿಷ್ಟವಾದ ವಸ್ತುಗಳ ಖರೀದಿಯಲ್ಲಿ ತಲ್ಲೀನರಾಗಿದ್ದರು. ಗಾಯಿತ್ರಿ ಥೀಮ್ ಪಾರ್ಕ್, ಪಾಕೋತ್ಸವ, ಅಡಿಕೆ ಸಂಶೋಧನಾ ಪ್ರದರ್ಶನ, ಗೋಶಾಲೆ, ಆಲೆಮನೆ ಇತ್ಯಾದಿ ಜನಾಕರ್ಷಕ ವಿಷಯಗಳತ್ತ ಜನರು ಲಗ್ಗೆ ಇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಗ್ಗೆ 9 ಗಂಟೆಗೆ ಆರಂಭವಾದ ಸಾಕ್ಷಾತ್ಕಾರ ಸಭಾದ ಸಾನ್ನಿಧ್ಯವನ್ನು ಸಿದ್ದಾಪುರದ ಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ದಿನೇಶ್ ಗುಂಡೂರಾವ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಪತ್ರಕರ್ತ ರವಿಶಂಕರ ಭಟ್ ಮತ್ತಿತರರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶ ಮೊದಲು ಎಂಬ ಉದಾತ್ತ ಹಿತಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ಹವ್ಯಕ ಸಮಾಜ ಸಂಖ್ಯಾ ದೃಷ್ಟಿಯಲ್ಲಿ ಚಿಕ್ಕ ಸಮಾಜವಾಗಿದ್ದರೂ ಇತರೆ ಸಮಾಜಗಳಿಗೆ ಮಾದರಿಯಾಗಿದೆ. ಬುದ್ದಿ, ವಿದ್ಯೆ, ಜಾಗೃತಿಯನ್ನು ಹೊಂದಿರುವ ಹವ್ಯಕರು ದೇಶದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಸಮಾಜವನ್ನು ಪ್ರತಿನಿಧಿಸುವ ಮೂರು ಮಠಗಳು ಕೂಡಾ ಶಿಷ್ಯರಿಗೆ ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಸನಾತನ ಧರ್ಮ ರಕ್ಷಣೆ ಮಾಡುತ್ತಿವೆ ಎಂದರು.

ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತೆ ಅಭಿಯಾನ, ರಾಮಚಂದ್ರಾಪುರ ಶ್ರೀಗಳ ಗೋಸಂರಕ್ಷಣೆ ಅಭಿಯಾನಗಳು ಇಡೀ ದೇಶದಲ್ಲಿ ಉತ್ತಮ ಪ್ರಭಾವ ಬೀರಿವೆ. ಕೃಷಿ, ಆಡಳಿತ, ವೈದ್ಯಕೀಯ, ಕಲೆ, ಸಾಹಿತ್ಯ ಹೀಗೆ ಎಲ್ಲ ರಂಗದಲ್ಲೂ ಛಾಪು ಒತ್ತಿರುವ ಹವ್ಯಕರದ್ದು ಕೇವಲ ಜಾತಿಗೆ ಅನುಕೂಲ ಮಾಡುವ ಕೆಲಸವಲ್ಲ. ತಮ್ಮ ಸುತ್ತಮುತ್ತಲಿನ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಧುನಿಕತೆಯ ಭರಾಟೆಯಲ್ಲೂ ತಮ್ಮತನವನ್ನು ಬಿಟ್ಟುಕೊಡದ ಅಪರೂಪದ ಸಮುದಾಯ ಹವ್ಯಕರು ಎಂದು ಶೋಭ ಕರಂದ್ಲಾಜೆ ಪ್ರಶಂಸಿಸಿದರು.

ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಹವ್ಯಕ ಸಮಾಜ ಯಾವಗಲೂ ಜಾಗೃತವಾಗಿದೆ. ಅದನ್ನು ಹೆಚ್ಚಿಸಲು ಈ ಸಮಾವೇಶ ಪೂರಕವಾಗಿದೆ. ಸಮಾಜದ ಬಂಧುಗಳು ಕೌಶಲವನ್ನು ಹೆಚ್ಚಿಸಿಕೊಂಡರೆ ಸಹಜವಾಗಿ ಸಮಾಜ ಅಭಿವೃದ್ಧಿಯಾಗುತ್ತದೆ. ಅಭಿವೃದ್ಧಿ ಎಂದ ಮಾತ್ರಕ್ಕೆ ನಮ್ಮ ಸಂಪ್ರದಾಯವನ್ನು ಮರೆಯಬಾರದು. ನಮ್ಮ ಆಚಾರ-ವಿಚಾರಗಳಿಗಾಗಿ ಎಂತಹದ್ದೇ ಹೋರಾಟವನ್ನಾದರೂ ಮಾಡಬೇಕು. ವ್ಯಕ್ತಿ ಎಂದಿಗೂ ತಾನು ಹುಟ್ಟಿದ ಮೂಲವನ್ನು ಮರೆಯಬಾರದು. ಹವ್ಯಕರಿಗೆ ಮೂರು ಮನೆಗಳು ಬಹಳ ಮುಖ್ಯ. ದೇವರಮನೆ, ಅಡುಗೆಮನೆ ಜೊತೆಗೆ ಕೊಟ್ಟಿಗೆಮನೆ. ನಮ್ಮ ಪೂಜಾ, ಸಂಧ್ಯಾವಂದನೆಗಾಗಿ ದೇವರಮನೆ. ಉದರ ಪೋಷಣೆ ಹಾಗೂ ಅತಿಥಿಗಳ ಆತಿಥ್ಯಕ್ಕಾಗಿ ಅಡುಗೆಮನೆ ಇವುಗಳ ಜೊತೆಗೆ ಗೋಮಾತೆಯ ರಕ್ಷಣೆಗಾಗಿ ಕೊಟ್ಟಿಗೆಮನೆ ಕೂಡಾ ಅಗತ್ಯವಿದೆ. ನಿತ್ಯ ನಮಗೆ ವಿವಿಧ ಕಾರಣಕ್ಕೆ ಹಾಲು ಬೇಕು ಆದರೆ ಹಸು ಬೇಡ ಎಂಬ ಭಾವನೆ ಬದಲಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಶಿಸ್ತು, ಸಂಯಮ, ದೇಶಭಕ್ತಿಗೆ ಹವ್ಯಕ ಸಮಾಜ ಹೆಸರಾಗಿದೆ. ಹವ್ಯಕರು ಕೇವಲ ತನ್ನ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದ ಸಮುದಾಯವಲ್ಲ. ಇತರೆ ಸಮಾಜದ ಪ್ರೀತಿಯನ್ನು ಗಳಿಸಿರುವ ಸಮುದಾಯ. ಇದಕ್ಕೆ ಸಾಕ್ಷಿ ರಾಷ್ಟ್ರನಾಯಕರಾಗಿದ್ದ ರಾಮಕೃಷ್ಣ ಹೆಗಡೆಯವರು. ಹೆಗಡೆಯವರು ಲಿಂಗಾಯತ ಸಮಾಜದ ನಾಯಕ ಎಂದು ಬಿಂಬಿಸಲ್ಪಟ್ಟಿದರು. ಸ್ವಂತ ಊರು, ಸಾಕಿದ ಪೋಷಕರು, ಕಲಿತ ಶಾಲೆ, ಉಪಕಾರ ಮಾಡಿದವರನ್ನು ಮರೆಯಬಾರದೆಂದು ಒಮ್ಮೆ ನನಗೆ ತಿಳುವಳಿಕೆ ಹೇಳಿದ್ದರು

-ಬಸವರಾಜ ಹೊರಟ್ಟಿ, ಸಭಾಪತಿ

ಹವ್ಯಕ ಎಂಬುದು ಒಂದು ಜಾತಿಯಲ್ಲ; ಇದೊಂದು ಸಂಸ್ಕೃತಿ. ಈ ಮಾತಿಗೆ ಇಲ್ಲಿ ನಡೆಯುತ್ತಿರುವ ಸಮ್ಮೇಳನವೇ ಸಾಕ್ಷಿಯಾಗಿದೆ. ರಾಷ್ಟ್ರಕ್ಕೆ ರಾಮಕೃಷ್ಣ ಹೆಗಡೆಯಂತಹ ಮಹಾನ್ ನಾಯಕರನ್ನು ನೀಡಿದ ಸಮಾಜ ಇದು. ವಿಶಿಷ್ಟ ಸಂಸ್ಕೃತಿ ಹೊಂದಿರುವ ಹವ್ಯಕ ಸಮಾಜ ಹಾಗೂ ಕೊಡವ ಸಮಾಜ ಗಣನೀಯವಾಗಿ ಕುಸಿಯುತ್ತಿರುವುದು ಅಪಾಯಕಾರಿ

-ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ

ಹವ್ಯಕ ಸಮಾಜದ ಜನಸಂಖ್ಯೆ ಕುಸಿಯುತ್ತಿರುವದಕ್ಕೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜನ ತಮ್ಮ ಮಕ್ಕಳು, ಕುಟುಂಬದ ಬಗ್ಗೆ ನಿರ್ಧಾರ ಮಾಡಲು ಸ್ವತಂತ್ರರು. ಕೇವಲ ಹವ್ಯಕರಲ್ಲ ದಕ್ಷಿಣ ಭಾರತದ ಜನಸಂಖ್ಯೆ ಕುಸಿಯುತ್ತಿದೆ. ಜನಸಂಖ್ಯೆ ಕುಸಿದರೂ ನಮ್ಮ ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿಕೊಳ್ಳಬೇಕು. ಹವ್ಯಕ ಸಮ್ಮೇಳನದಲ್ಲಿ ಇತರೆ ಸಮಾಜದ ಮುಖಂಡರನ್ನು ಸನ್ಮಾನಿಸುತ್ತಿರುವುದು ಸೌಹಾರ್ಧತೆಗೆ ಮುನ್ನುಡಿ.

-ದಿನೇಶ ಗುಂಡೂರಾವ್, ಆರೋಗ್ಯ ಸಚಿವ

ಸಣ್ಣ ಸಮಾಜವಾಗಿರುವ ಹವ್ಯಕರ ಸಮ್ಮೇಳನಕ್ಕೆ ದೊಡ್ಡ ಬೆಲೆ ಬಂದಿದೆ. ಸಮುದಾಯದಲ್ಲಿ ಜನ ಕಡಿಮೆ ಇರಬಹುದು ಆದರೆ ಬುದ್ದಿವಂತಿಕೆ, ಹಣಕ್ಕೆ ಕೊರತೆ ಇಲ್ಲ. ಎಲ್ಲರನ್ನೂ ಪ್ರೀತಿಸುವ ಔದಾರ್ಯವಿದೆ. ಹವ್ಯಕರ ತಿಂಡಿ-ತಿನಿಸುಗಳು ವಿಶ್ವದಲ್ಲೇ ಪ್ರಸಿದ್ಧಿ.

-ಶಿವರಾಮ ಹೆಬ್ಬಾರ, ಯಲ್ಲಾಪುರ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net