ಸ್ವಚ್ಛತೆ ಜಾಗೃತಿಗೆ ಹರಿದುಬಂದ ಜನಸಾಗರ

CTD 14 Sapthaha 2
Published on

ಚಿತ್ರದುರ್ಗ: ನಾಲ್ಕು ದಿಕ್ಕುಗಳಿಂದಲೂ ಹರಿದು ಬಂದ ಜನಸಾಗರ. ಇದರಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ. ಅರ್ಧ ತಾಸಿನೊಳಗೆ ಇಡೀ ವೃತ್ತ ಭರ್ತಿಯಾಗಿ ಕಾಲಿಡಲಿಕ್ಕೂ ಜಾಗವಿಲ್ಲದಂತ ಪರಿಸ್ಥಿತಿ. ದಾರಿಹೋಕರು ನಿಬ್ಬೆರಗಾದ ಕ್ಷಣ…

ಜನರಲ್ಲಿ ಶುದ್ಧ ಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆ, ಪರಿಸರ ನೈರ್ಮಲ್ಯ ಕುರಿತು ಜಿಲ್ಲಾಡಳಿತ, ಜಿಪಂನಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಚಾಲನೆ ಪಡೆದ ಬೃಹತ್ ಜನಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು.
ಮೊಳಗಿದ ಜಾಗೃತಿ ಘೋಷಣೆ: ‘ಕುದಿಸಿ, ಆರಿಸಿದ ನೀರನ್ನೇ ಬಳಸಿ’, ‘ಮಲ, ಮೂತ್ರ ವಿಸರ್ಜನೆಗೆ ತಪ್ಪದೆ ಶೌಚಗೃಹ ಬಳಸಿ’, ‘ಮನೆಯಲ್ಲಿನ ನೀರಿನ ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ’, ‘ಕುಡಿಯಲು ಶುದ್ಧ ನೀರು, ಸೇವಿಸುವ ಆಹಾರ ಶುದ್ಧವಾಗಿರಲಿ’, ‘ತಿಂಡಿ-ಊಟಕ್ಕೂ ಮುನ್ನ ಹಾಗೂ ಶೌಚ ಬಳಸಿದ ನಂತರ ಕೈಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆಯಿರಿ’, ಎಂಬಿತ್ಯಾದಿ ಜಾಗೃತಿ ಮೂಡಿಸುವ ನಾಮಫಲಕಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕೈಗಳಲ್ಲಿ ರಾರಾಜಿಸಿದವು. 35 ವಾರ್ಡ್‌ಗಳಲ್ಲೂ ಪ್ರಭಾತ್ ಫೇರಿ ಮೂಲಕ ಸ್ವಚ್ಛತಾ ಜಾಗೃತಿಯ ಘೋಷಣೆ ಮೊಳಗಿಸಿದರು.

ಅರಿವಿನ ಹಬ್ಬದ ವಾತಾವರಣ: ಹಳದಿ ಸೀರೆಯುಟ್ಟ ನೂರಾರು ಮಹಿಳೆಯರು ಕುಂಭದೊಂದಿಗೆ ಕಂಗೊಳಿಸಿದರು. ಕೈತೊಳೆಯುವ ಪ್ರಾತ್ಯಕ್ಷಿಕೆ ಕೂಡ ಗಮನ ಸೆಳೆಯಿತು. ವೀರಗಾಸೆ, ಪಟ ಕುಣಿತ, ಬೊಂಬೆ ಕುಣಿತ, ಗಾಯನ, ಹಲಗೆ ವಾದನ, ಬೀದಿ ನಾಟಕ ಸೇರಿ ಅನೇಕ ಕಲಾತಂಡಗಳು ನಗರದ ವಿವಿಧೆಡೆ ಮಿಂಚಿನ ಸಂಚಲನ ನಡೆಸಿ, ಅರಿವು ಮೂಡಿಸಲು ಯತ್ನಿಸಿದರು.

ಜಾಗೃತಿ ಸಂದೇಶ ಸಾರುವ ಬಿತ್ತಿ ಪತ್ರಗಳ ಪ್ರದರ್ಶನ, ಎಲ್ಇಡಿ ವಾಹನದಲ್ಲಿ ವಿಡಿಯೋ ಚಿತ್ರ ಪ್ರದರ್ಶನ, ಗ್ರಾಪಂಗಳಲ್ಲಿ ಆಂದೋಲನ, ಕರಪತ್ರಗಳ ಹಂಚಿಕೆ, ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಅರಿವು, ಪಂಜಿನ ಮೆರವಣಿಗೆ ಒಳಗೊಂಡು ಹತ್ತಾರು ಬಗೆಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ವಿವಿಧ ಇಲಾಖೆ ನೌಕರರು ಪಾಲ್ಗೊಂಡಿದ್ದರು. ಒಟ್ಟಾರೆ ಹಲವರನ್ನೊಳಗೊಂಡ ಬೃಹತ್ ಜಾಗೃತಿ ಜಾಥಾ ಕೂಡ ಅರಿವಿನ ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಪಂ ಸಿಇಒ ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಎಸ್‌ಪಿ ಕೆ.ಪರಶುರಾಮ್, ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ಡಿಎಚ್‌ಒ ಡಾ.ಆರ್.ರಂಗನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಬಿಇಒ ನಾಗಭೂಷಣ್, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net