

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೂರನೇ ಶನಿವಾರ ಭಕ್ತರ ದಂಡೇ ಆಗಮಿಸಿತ್ತು.
ಮೊದಲ ಶ್ರಾವಣ ಶನಿವಾರ ಅಲಮೇಲು ರಂಗನಾಯಕಿ, ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಉತ್ಸವಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಮಾಡಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂದಿತ್ತು. ಎಲ್ಲರೂ ದೊಡ್ಡ ತೇರಿನ ಬೀದಿಯಲ್ಲಿ ತಮ್ಮ ವಾಹನ ನಿಲ್ಲಿಸಿ ನಡೆದುಕೊಂಡೇ ದೇಗುಲಕ್ಕೆ ತೆರಳಿದರು.
ದೇವಸ್ಥಾನದ ಮುಂಭಾಗ ದಾಸರು ಶಂಖ ಊದಿ, ಜಾಗಟೆಗಳನ್ನು ಬಾರಿಸಿ ಭಕ್ತಿ ಮೆರೆದರು. ಕಡ್ಲೇಪುರಿ, ಬೆಲ್ಲ, ಅಕ್ಕಿ, ಬಾಳೆಹಣ್ಣು ಹಾಕಿ ದೇಗುಲದ ಸುತ್ತ ಬಹುಪರಾಕ್ ಸೇವೆ ಮಾಡಿದರು. ದೇಗುಲದ ಮುಂಭಾಗ ಇಟ್ಟಿದ್ದ ಹೂ, ಹಣ್ಣು, ಪೂಜಾ ಸಾಮಾಗ್ರಿಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು. ದೇಗುಲದ ಕಮರಿಯಲ್ಲಿರುವ ದಾಸೋಹ ಭವನದಲ್ಲೂ ಸಾಲಿನಲ್ಲಿ ನಿಂತ ಭಕ್ತರ ಗುಂಪು ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇಗುಲದ ದಾಸೋಹ ಹಾಗೂ ಕಮರಿಗೆ ತೆರಳುವ ದೇಗುಲದ ಮಾರ್ಗವನ್ನು ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ಇಲ್ಲಿಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು.