

ಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ತೊಟ್ಟಿಲಮಡು ಜಾತ್ರಾಮಹೋತ್ಸವ ಬಳಿಕ ಶನಿವಾರ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮೇಲುಕೋಟೆ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಚೆಲುವನಾರಾಯಣಸ್ವಾಮಿಗೆ ರಾಜ ಒಡೆಯರ್ ಅರ್ಪಿಸಿದ ವಜ್ರಖಚಿತ ರಾಜಮುಡಿ ಗಂಡುಬೇರುಂಡ ಪದಕ ಹಾಗೂ 16ಬಗೆಯ ತಿರುವಾಭರಣಗಳನ್ನು ಧರಿಸಿ ರಾತ್ರಿ ಕಣಿವೆಯಬಳಿ ವೈಕುಂಠಗಂಗೆಯ ಬಳಿ ತೊಟ್ಟಿಲಮಡು ಜಾತ್ರೆ ನಡೆಯಿತು. ಈ ವೇಳೆ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಕದಂಬ ಮತ್ತು ದದಿಯೋದ ಪ್ರಸಾದ ವಿತರಿಸಲಾಯಿತು. ಮೇಲುಕೋಟೆ ಗ್ರಾಮಪಂಚಾಯಿತಿ ವತಿಯಿಂದ ಕುಡಿಯುವ ನೀರು ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಯಿತು. ರಾತ್ರಿ 10ಗಂಟೆಯವರೆಗೆ ಭಕ್ತರು ಹರಿಯುವ ನೀರಿನ ಪಕ್ಕವಿರುವ ವೈಕುಂಠನಾಥನಿಗೆ ಪೂಜೆ ನೆರವೇರಿಸಿದರು.
ಜನದಟ್ಟಣೆಯಿಂದ ಪರದಾಟ : ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನದ ವೇಳೆಗೆ ಹೆಚ್ಚಾಗಿ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಜನದಟ್ಟಣೆ ಉಂಟಾಗಿ ಪರದಾಡುವಂತಾಯಿತು. ಶನಿವಾರ ಮೇಲುಕೋಟೆಯಲ್ಲಿ ವಾಹನದಟ್ಟಣೆಯಿಂದ ಉತ್ಸವ ಬೀದಿಗಳಲ್ಲಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿದ್ದರಿಂದ ಉತ್ಸವಕ್ಕೆ ಅಡಚಣೆ ಉಂಟಾಯಿತು. ಭಾನುವಾರ ರಜಾದಿನಗಳಂದಾದರೂ ಆಸ್ಪತ್ರೆ ಮುಂಭಾಗದ ಮೈದಾನದಲ್ಲಿ ಪಾರ್ಕಿಂಗ್ ಮಾಡಿ ವಾಹನದಟ್ಟಣೆಯನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಸೂಚನೆ ನೀಡಿದ್ದರೂ ಸಹ ಗ್ರಾಮ ಪಂಚಾಯಿತಿ ಮತ್ತು ಮೇಲುಕೋಟೆ ಪೊಲೀಸರು ಸೂಚನೆ ಪಾಲಿಸದ ಕಾರಣ ದೇವಾಲಯದ ಸಾಂಪ್ರದಾಯಿಕ ಉತ್ಸವಗಳಿಗೂ ವಾಹನ ನಿಲುಗಡೆಯಿಂದ ಅಡಚಣೆಯಾಗುತ್ತಿರುವ ಘಟನೆ ಪದೇ ಪದೆ ಮರುಕಳಿಸುತ್ತಿದೆ. ಇನ್ನು ಮುಂದಾದರೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶನೀಡಿ ಈ ಅವ್ಯವಸ್ಥೆಗೆ ಇತಿಶ್ರೀ ಹಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ
ಚೆಲುವನಾರಾಯಣಸ್ವಾಮಿಯ ಉತ್ಸವ 12 ಗಂಟೆಗೆ ನಡೆಯಬೇಕಿತ್ತಾದರೂ ಭಕ್ತರ ದಟ್ಟಣೆಯಿಂದಾಗಿ 1-30ಕ್ಕೆ ನೆರವೇರಿತು. ಭಕ್ತರ ಹರಿವು ಕಡಿಮೆಯಾಗದ ಕಾರಣ ಬ್ಯಾರಿಕೇಡ್ ಹಾಕಿ ಭಕ್ತರನ್ನು ನಿಯಂತ್ರಿಸಿದ ನಂತರವೇ ಉತ್ಸವ ನಡೆಸುವಂತಾಯಿತು. ದೇವರಉತ್ಸವ ಹೊರಬರಲು ಮತ್ತು ದೇವಾಲಯಕ್ಕೆ ಮರಳುವ ವೇಳೆ ಭಕ್ತರ ನಿಯಂತ್ರಣಕ್ಕೆ ಹರಸಾಸಹ ಪಡುವಂತಾಯಿತು. ಈ ವೇಳೆ ತಳ್ಳಾಟ ನೂಕಾಟ ನಡೆದು ಮಹಿಳಾ ಭಕ್ತರು ಪರದಾಡಿದರು.