

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿದ್ದು, ಭಾನುವಾರ ಭಕ್ತಸಾಗರವೇ ಹರಿದು ಬಂದಿತು.
ಹುಣ್ಣಿಮೆ ದಿನದಂದು ಮತ್ತಿಗೆ ಮಣ್ಣಿನಿಂದ ತಯಾರಿಸಿದ್ದ ದೇವಿಯ ಮೂರ್ತಿಗೆ ಮುತ್ತೈದೆಯರು ಧಾರ್ಮಿಕ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಜಯಘೋಷದ ನಡುವೆ ಮಹಾಮಂಗಳಾರತಿ ನೆರವೇರಿಸಿ ಪ್ರತಿಷ್ಠಾಪನೆ ಮಾಡಿದರು. ಡಿ.ಎಂ.ಕುರ್ಕೆ, ಕಿತ್ತನಕೆರೆ, ಕಡಲಮಗ್ಗೆ, ಕೆ.ಶಂಕರನಹಳ್ಳಿ, ದಿಬ್ಬೂರು, ಶಶಿವಾಳ, ಪಿ.ಹೊಸಳ್ಳಿ ಸೇರಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದರು.
ಸ್ವರ್ಣಗೌರಿ ಮಹೋತ್ಸವ ಹತ್ತು ದಿನ ನಡೆಯಲಿದ್ದು ಸೆ.15ರಂದು ಭಾನುವಾರ ಸಂಜೆ ಗೋಧೂಳಿ ಲಗ್ನದಲ್ಲಿ ವಿಸರ್ಜನಾ ಕಾರ್ಯ ನೆರವೇರಲಿದೆ.
ಮುದ್ದೇಗೌಡರ ವಂಶಸ್ಥರು ಮಾಡಾಳು ಗ್ರಾಮದ ಕುಮಾರಾಶ್ರಮ ರಸ್ತೆಗೆ ಹೊಂದಿಕೊಂಡಂತಿರುವ ಚಿತ್ರಮಂದಿರದ ಆವರಣದಲ್ಲಿ ಗೌರಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ನೇತೃತ್ವದಲ್ಲಿ ಸಂಪ್ರದಾಯದಂತೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸೆ.17ರಂದು ಗ್ರಾಮದ ಕಲ್ಯಾಣಿಯಲ್ಲಿ ವಿಸರ್ಜನಾ ಮಹೋತ್ಸವ ಜರುಗಲಿದೆ.