

ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ದಾಖಲೆಯ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಗುರುವಾರ 2.58 ಲಕ್ಷ ಜನರು ದರ್ಶನ ಪಡೆದಿದ್ದಾರೆ.
ಶುಕ್ರವಾರ ಬೆಳಗ್ಗೆ 7.25 ರಿಂದ ಮಧ್ಯಾಹ್ನ 2.30ರವರೆಗೆ, 1,60,226 ಜನ ದರ್ಶನ ಪಡೆದಿದ್ದಾರೆ. ಬೆಳಗ್ಗೆ ಧರ್ಮ ದರ್ಶನದ ಸರತಿ ಸಾಲು ಬೆಂಗಳೂರು-ಮೈಸೂರು ರಸ್ತೆವರೆಗೆ ವಿಸ್ತರಿಸಿತ್ತು. ಸಾವಿರ ರೂ. ಟಿಕೆಟ್‌ನ ಸಾಲು ಕೂಡ ಭರ್ತಿಯಾಗಿತ್ತು. 300 ರೂ. ಟಿಕೆಟ್‌ನ ಸಾಲು ನಗರ ಬಸ್ ನಿಲ್ದಾಣದವರೆಗೆ ವಿಸ್ತರಿಸಿತ್ತು. ಪ್ರಾರಂಭದ ದಿನಗಳಲ್ಲಿ ಶೀಘ್ರ ದರ್ಶನ ದೊರಕುತ್ತಿತ್ತು. ಈಗ ಧರ್ಮದರ್ಶನದ ಸಾಲಿನಲ್ಲಿ 8 ರಿಂದ 9 ಗಂಟೆ ಕಾಯಬೇಕಾಗಿದೆ. ಸಾವಿರ ರೂ. ಟಿಕೆಟ್‌ನಲ್ಲೂ ಸುಮಾರು ಎರಡು ತಾಸು, 300 ರೂ. ಟಿಕೆಟ್ ಪಡೆದರೆ 4 ರಿಂದ 5 ಗಂಟೆ ಕಾಯಬೇಕಿದೆ.
ದೇವರಿಗೆ ಶನಿವಾರ ರಾತ್ರಿ ವಿಶೇಷ ಪೂಜೆ ನೆರವೇರಿಸಬೇಕಿದೆ. ಹೀಗಾಗಿ ಶನಿವಾರ ರಾತ್ರಿ 10 ಗಂಟೆಗೆ ದೇಗುಲದ್ವಾರ ಮುಚ್ಚಲಾಗುತ್ತದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಮತ್ತೆ ದರ್ಶನ ಆರಂಭವಾಗಲಿದೆ.