ಶ್ರೀ ಚಾಮುಂಡೇಶ್ವರಿ ದೇಗುಲಕ್ಕೆ ಹರಿದುಬಂದ ಭಕ್ತಸಾಗರ

photo 2 cha
Published on

ನಂಜನಗೂಡು: ಮೊದಲನೇ ಆಷಾಢ ಶುಕ್ರವಾರದ ಪ್ರಯುಕ್ತ ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಮೊದಲನೇ ಆಷಾಢ ಶುಕ್ರವಾರ ಪ್ರಯುಕ್ತ ಮುಂಜಾನೆಯಿಂದಲೇ ಅಮ್ಮನವರಿಗೆ ಹಾಲು, ಮೊಸರು, ಜೇನುತುಪ್ಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ಸಾಂಗೋಪವಾಗಿ ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೇವಾಲಯದ ಸುತ್ತಮುತ್ತ ಹಾಗೂ ದೇವಾಲಯದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿ ಧನ್ಯತಾಭಾವದಿಂದ ಭಾವ ಪರವಶರಾದರು.

ಮುಂಜಾನೆಯಿಂದಲೇ ಭಕ್ತಾದಿಗಳು ಅಮ್ಮನ ದರ್ಶನ ಪಡೆಯಲು ಉದ್ದನೆಯ ಸಾಲಿನಲ್ಲಿ ನಿಂತು ದೇವಾಲಯದ ಆವರಣದಲ್ಲಿ ನಿಂಬೆಹಣ್ಣಿನ ದೀಪದ ಆರತಿಯನ್ನು ಮಾಡಿ ಹರಕೆ ತೀರಿಸಿ, ಮಹಿಳೆಯರು ಬನ್ನಿ ಮರವನ್ನು ಪ್ರದಕ್ಷಿಣೆ ಮಾಡಿ ಮುತ್ತೈದೆಯರಿಗೆ ಬಳೆ ಅರಿಸಿನ ಕುಂಕುಮ ಭಾಗಿನ ನೀಡಿ, ಮದುವೆಯಾಗದ ಮಹಿಳೆಯರು ಕಂಕಣಭಾಗ್ಯ ಕೂಡಿ ಬರಲಿ ಎಂದು ದೀಪ ಹಚ್ಚಿದರೆ ಮದುವೆಯಾದವರು ಮಕ್ಕಳ ಭಾಗ್ಯ ದೊರಕಿಸುವಂತೆ ಹರಕೆ ಕಟ್ಟುವ ದೃಶ್ಯ ಸಾಮಾನ್ಯವಾಗಿತ್ತು.

ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಶ್ರೀಕಂಠೇಶ್ವರಸ್ವಾಮಿ ದೇಗುಲದ ಇಒ ಜಗದೀಶ್ ನೇತೃತ್ವದಲ್ಲಿ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net