ಕೋಟದ ದೊಡ್ಡ ಗಣೇಶೋತ್ಸವಕ್ಕೆ ವೈಭವದ ತೆರೆ

kota (4)
Published on

ಕೋಟ: ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವದ ಒಂಬತ್ತು ದಿನಗಳ ವೈಭವದ ಕಾರ್ಯಕ್ರಮಗಳಿಗೆ ಗುರುವಾರ ವರ್ಣರಂಜಿತವಾಗಿ ತೆರೆ ಎಳೆಯಲಾಯಿತು. ಕೋಟದ ಅಮೃತೇಶ್ವರೀ ದೇಗುಲದಲ್ಲಿ ಆಚರಿಸಲಾದ 50ನೇ ವರ್ಷದ ಗಣೇಶೋತ್ಸವ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳೊಂದಿಗೆ ಸಂಪನ್ನಗೊಂಡಿತು.

ಕೊನೆಯ ದಿನವಾದ ಗುರುವಾರ ಮೂಡುಗಣಪತಿ ಸೇವೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಲಕ್ಕಿಡಿಪ್ ಫಲಿತಾಂಶ ಇನ್ನಿತರ ಕಾರ್ಯಕ್ರಮ ನಡೆಯಿತು.

ವೈಭವದ ಶೋಭಾಯಾತ್ರೆ: ಕೋಟದ ಇತಿಹಾಸದಲ್ಲೇ ಮೊದಲೆಂಬಂತೆ ದೊಡ್ಡಮಟ್ಟದ ಜನಸಾಗರ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಯಿತು. ಗುರುವಾರ ಸಂಜೆ ಅಮೃತೇಶ್ವರೀ ದೇಗುಲದಿಂದ ಹೊರಟ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಕೋಟದ ರಾಷ್ಟ್ರೀಯ ಹೆದ್ದಾರಿ ಮಣೂರು ಇಂದ್ರಪ್ರಸ್ಥ ಸರ್ಕಲ್ ಬಳಿಯಿಂದ ಕೋಟ ಹೈಸ್ಕೂಲ್ ಹೆದ್ದಾರಿ ಮೂಲಕ ಕೋಟ ಪಡುಕರೆ ಕಡಲಿಗೆ ತೆರಳಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಇದೇ ಮೊದಲ ಬಾರಿಗೆ ವಿವಿಧ ಸಂಘಸಂಸ್ಥೆಗಳ ಬೃಹತ್ ಗಾತ್ರದ ಸ್ತಬ್ಧಚಿತ್ರಗಳು ಜನರ ಮನ ಸೆಳೆದವು. ಕೋಟದ ಜನತಾ ಸಮೂಹ ಸಂಸ್ಥೆ ತಯಾರಿಸಿದ್ದ ಆಪರೇಶನ್ ಸಿಂಧೂರ ಮಾದರಿಯಲ್ಲಿ ಐಎನ್‌ಎಸ್ ನೌಕೆ, ಬ್ರಹ್ಮೋಸ್ ಮಾದರಿಯ ಕ್ಷಿಪಣಿ, ಸುಕೋಯ್ ಸ್ತಬ್ಧಚಿತ್ರ ಆಕರ್ಷಣೀಯವಾಗಿತ್ತು. ಬಾರಿಕೆರೆ ಯುವಕ ಮಂಡಲದ ಕಜಾಸುರ, ಅರ್ಚಕ ಯುವ ಸಂಘದಿಂದ ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು. ದಾರಿ ಉದ್ದಕ್ಕೂ ಉಪಾಹಾರ, ಪಾನೀಯ ವಿತರಿಸಲಾಯಿತು. ಸಿಡಿಮದ್ದು ಪ್ರದರ್ಶನ ಜನಮನ ಸೂರೆಗೊಂಡಿತು. ಸಾವಿರಾರರು ಜನರು ಮೆರವಣಿಗೆಯಲ್ಲಿ ಸಾಗಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್, ಸಮಿತಿ ಅಧ್ಯಕ್ಷ ರಮಾನಾಥ್ ಜೋಗಿ,ಉಪಾಧ್ಯಕ್ಷರಾದ ಸೋಮ ಮರಕಾಲ, ಗಣೇಶ ಪೂಜಾರಿ, ಸುರೇಶ್ ಗಾಣಿಗ ಶೇವಧಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಪ್ರಮುಖರಾದ ಚಂದ್ರ ಪೂಜಾರಿ, ಜಿ.ಎಸ್.ಆನಂದ್ ದೇವಾಡಿಗ, ದೇವದಾಸ ಕಾಂಚನ್, ಉಮೇಶ್ ಕದ್ರಿಕಟ್ಟು, ಜೀವನ್, ರಂಜಿತ್‌ಕುಮಾರ್, ಗಿರೀಶ್ ದೇವಾಡಿಗ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net