

ಆನಂದಪುರ: ಅಡಕೆ ಕೃಷಿಯಲ್ಲಿ ತೊಡಗಿರುವ ರೈತರು ಎಲ್ಲ ಬಗೆಯ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಇಂತಹ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಸಾಧ್ಯವಿದೆ ಎಂದು ಶಿವಮೊಗ್ಗದ ನವುಲೆಯ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡವೆಪ್ಪರ್ ತಿಳಿಸಿದರು.
ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಬೋರ್ಡೋ ದ್ರಾವಣ ಸಿದ್ಧಪಡಿಸುವಿಕೆ ಕಾರ್ಯಾಗಾರದಲ್ಲಿ ಮಾತನಾಡಿ, ಅಡಕೆ ಕೃಷಿಯಲ್ಲಿ ಸಾಕಷ್ಟು ಸಂಶೋಧನೆ ನಡೆದಿದೆ. ರೈತರು ಸಂಶೋಧನಾ ಕೇಂದ್ರದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಎಂದರು.
ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಮಾತನಾಡಿ, ಮುಂದಿನ ದಿನದಲ್ಲಿ ವರದಾ ಮೂಲದಲ್ಲಿ ಅಡಕೆ ಕೃಷಿಕರ ಜತೆ ಸಂವಾದ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲು ವಿನಂತಿಸಿದರು. ಅಡಕೆ ಸಂಶೋಧನಾ ಕೇಂದ್ರದ ಪ್ರಮುಖರಾದ ಡಾ. ಎಚ್.ಸಿ.ಸ್ವಾತಿ, ಡಾ.ಕಿರಣ್ ಕುಮಾರ್, ಡಾ.ಮಂಜೇಶ್ ಇತರರು ಇದ್ದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 150 ಕ್ಕೂ ಅಧಿಕ ಅಡಕೆ ಬೆಳೆಗಾರರು ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ನರಸಿಂಹಮೂರ್ತಿ ವೈಜ್ಞಾನಿಕವಾಗಿ ಬೋರ್ಡೋ ದ್ರಾವಣ ತಯಾರಿಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.