

ನಾಪೋಕ್ಲು: ಯಾವುದೇ ಜನಾಂಗ ಭೌತಿಕವಾಗಿ ಅಭಿವೃದ್ಧಿಗಿಂತಲೂ ಚಾರಿತ್ರಿಕವಾಗಿ ಅಭಿವೃದ್ಧಿ ಹೊಂದಿದಾಗ ಮುಂದಿನ ತಲೆಮಾರು ಸುಸಂಸ್ಕೃತ ಜೀವನ ನಡೆಸಲು ಸಾಧ್ಯ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಭಿಪ್ರಾಯಪಟ್ಟರು.
ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಮೈಸೂರಿನ ಸಮಾಜದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೈಲ್ ಮುಹೂರ್ತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗೌಡ ಜನಾಂಗಕ್ಕೆ ವಿಶಿಷ್ಟವಾದ ಭಾಷೆ ಇರುವುದೇ ಹೆಮ್ಮೆ. ಅಂತಹ ಭಾಷೆಯನ್ನು ಉಳಿಸಿ ಬೆಳೆಸಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ದಯಾನಂದ ಮಾತನಾಡಿ, ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತವನ್ನು ಕೊಡಗಿನ ಹೊರಗಡೆ ನೆಲೆಸಿರುವ ಗೌಡ ಸಮಾಜದವರು ಆಚರಿಸಿಕೊಂಡು ಬರುವುದರಿಂದ ಸಮುದಾಯದ ಜನರಲ್ಲಿ ಬಾಂಧವ್ಯ ಬೆಳೆಸಲು ಸಾಧ್ಯವಾಗಲಿದೆ. ಗೌಡ ಸಮಾಜದ ಹಿರಿಯರು ಬೇರೆ ಬೇರೆ ಊರುಗಳಲ್ಲಿ ಸಮಾಜದ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕುಂಬಾರನ ಬಸಪ್ಪ, ಸಮಾಜದ ಏಳಿಗೆಗೆ ಸಹಕರಿಸಿದವರನ್ನು ಸ್ಮರಿಸಿದರು.
ಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ ಮಾತನಾಡಿ, ಕೊಡಗು ಗೌಡ ಜನಾಂಗದವರು ಯಾವತ್ತು ಒಳ್ಳೆಯ ಆಚಾರ ವಿಚಾರ ನಡೆನುಡಿ ಅನುಸರಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು. ಸಮಾರಂಭದಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಶೂಟರ್ ಕಾನಡ್ಕ ಧನ್ವಿ ಹನೀಷ್ ಮತ್ತು ಹಾಕಿಯಲ್ಲಿ ಸಾಧನೆ ಮಾಡಿದ ಕುಂಭ ಗೌಡನ ವಿಶ್ವಜಿತ್ ವಿನೋದ್ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಉಪಾಧ್ಯಕ್ಷ ಕುದುಪಜೆ ಚಂದ್ರಶೇಖರ್, ಖಜಾಂಚಿ ನಡುವಟ್ಟೀರ ಲಕ್ಷ್ಮಣ, ನಿರ್ದೇಶಕರಾದ ಹೊಸೂರು ರಾಘವ, ಪಾಣತ್ತಲೆ ವಸಂತ, ಕೊಂಬಾರನ ಸುಬ್ಬಯ್ಯ, ಕುಂಟುಪಣಿ ರಮೇಶ್, ತೋಟಂಬೈಲು ಇಂದಿರಾ, ಚಪ್ಪೇರ ಯಮುನಾ, ಕುಂಟುಪಣಿ ಶೀಲಾ ಮತ್ತಿತರರಿದ್ದರು. ಈ ವೇಳೆ ಸಮಾಜದವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಕಾರ್ಯಕ್ರಮಕ್ಕೂ ಮೊದಲು ಕೊಡಗಿನ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು . ಈ ಸಂದರ್ಭ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್, ಕಾರ್ಯದರ್ಶಿ ಪೊನ್ನೇಟಿ ನಂದ, ಸಹ ಕಾರ್ಯದರ್ಶಿ ನಡುಮನೆ ಚಂಗಪ್ಪ ಇತರರಿದ್ದರು.