

ಮೂಗೂರು: ಗ್ರಾಮೀಣ ವಿದ್ಯಾರ್ಥಿಗಳಲ್ಲಿನ ಕಲಿಕಾ ಆಸಕ್ತಿಯನ್ನು ಹಿಮ್ಮಡಿಗೊಳಿಸುವ ಸಲುವಾಗಿ ಪ್ರತಿ ಶಾಲೆಯಲ್ಲಿ ವಿಜ್ಞಾನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ವಿ.ವೆಂಕಟರಾಮಯ್ಯ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಅಭಿವೃದ್ಧಿ ಸಮಿತಿ ವತಿಯಿಂದ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀ ತ್ರಿಪುರ ಸುಂದರಿ ರಂಗ ವೇದಿಕೆಯಲ್ಲಿ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಿದರೆ ಸಾಲದು. ಬದಲಾಗಿ ಪ್ರಾಯೋಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಕಲಿಕಾ ಕೌಶಲದಲ್ಲಿ ಪ್ರಗತಿ ಕಾಣಬಹುದು ಎಂದರು.
ಪ್ರಾಧ್ಯಾಪಕ ಸೋಮಶೇಖರ್ ಮಾತನಾಡಿ, ಸಂಚಾರಿ ವಿಜ್ಞಾನ ಕಾರ್ಯಾಗಾರ ಕಾರ್ಯಕ್ರಮದಲ್ಲಿ 70ರಿಂದ 80 ವಿಜ್ಞಾನ ಪ್ರಯೋಗ ಮಾದರಿಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಜತೆಗೆ ಸಸ್ಯಶಾಸ್ತ್ರದ ಮಾದರಿಯನ್ನು ತಯಾರಿಸಿ ಮಕ್ಕಳ ವೀಕ್ಷಣೆಗೆ ಅನುವು ಮಾಡಲಾಗಿದೆ ಎಂದರು.
ಬಳಿಕ ವಿಜ್ಞಾನ ವಿಷಯ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಪ್ರಾಣಿ, ಗಣಿತ ಶಾಸ್ತ್ರ ವಿಷಯವಾರು ಕುರಿತು ಮಾದರಿ ಪ್ರಾಯೋಗಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಮಗ್ನರಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಪ್ರೊ.ಪ್ರಸಾದ್, ಡಾ.ಬಸವರಾಜಪ್ಪ, ಪ್ರೊ.ಶಶಿಕಾಂತ್, ಡಾ.ವಿಜಯಲಕ್ಷ್ಮೀ, ಶಾಲೆಯ ಉಪ ಪ್ರಾಂಶುಪಾಲ ಪುಟ್ಟಸ್ವಾಮಿ ಇತರರಿದ್ದರು.