

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ದೇಶದ ಸ್ವಚ್ಛ ನಗರವಾಗಿ ರೂಪಿಸುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಅಪಾರ. ಆದರೆ, ದೀಪದ ಕೆಳಗೆ ಕತ್ತಲು ಎಂಬಂತೆ ಪೌರ ಕಾರ್ಮಿಕರ ಮಕ್ಕಳು ಕಲಿಯುತ್ತಿರುವ ಕುದುರೆಮಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೋಚನೀಯ ಸ್ಥಿತಿಯಲ್ಲಿ ಇದೆ.
ಮಳೆ ಬಂದರೆ ಸೋರುವ ಶಾಲೆ, ಅಶುಚಿತ್ವದ ಕೂಡಿದ ಶೌಚಗೃಹಗಳು, ಶುಚಿತ್ವ ಕಾಣದ ಶಾಲಾ ಆವರಣ, ಶಿಥಿಲಾವಸ್ಥೆಗೆ ತಲುಪಿದ ಕೊಠಡಿಗಳು… ಈ ದೃಶ್ಯಗಳನ್ನು ನಗರದ ಗೌತಮ ವಿದ್ಯಾರ್ಥಿ ನಿಲಯದ ಹಿಂಭಾಗದಲ್ಲಿರುವ ಕುದುರೆಮಾಳ ಶಾಲೆಯಲ್ಲಿ ನೋಡಿದ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಶಿಕ್ಷಣ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
ನಗರವನ್ನು ಶುಚಿಗೊಳಿಸುವ ಕಾರ್ಯದಲ್ಲಿ ಪೌರ ಕಾರ್ಮಿಕರು ದಿನನಿತ್ಯ ತೊಡಗುತ್ತಾರೆ. ಅವರ ರೀತಿಯಲ್ಲಿಯೇ ಅವರ ಮಕ್ಕಳು ಸಹ ಇದೇ ವೃತ್ತಿಯಲ್ಲಿ ಮುಂದುವರೆಯಬಾರದರು. ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಪೌರ ಕಾರ್ಮಿಕರಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ನಾನು ಶಾಲೆಯ ಸ್ಥಿತಿಗತಿ ಪರಿಶೀಲಿಸಲು ಭೇಟಿ ನೀಡುವ ವಿಚಾರ ತಿಳಿದರೂ ಸಹ ಡಿಡಿಪಿಐ ಹಾಗೂ ಬಿಇಒ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಕೂಡಲೇ ಅವರಿಗೆ ಆಯೋಗದಿಂದ ಅವರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ತಲೆ ಮೇಲೆ ಗಾರೆ ಉದುರಿ ಬೀಳುತ್ತಿದೆ. ಶಾಲಾ ಕೊಠಡಿಯನ್ನು ದುರಸ್ತಿ ಪಡಿಸುವಂತೆ ನಗರ ಪಾಲಿಕೆ ಸದಸ್ಯೆ ವೇದಾವತಿ ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಪೌರ ಕಾರ್ಮಿಕರ ಮಕ್ಕಳು ಓದುತ್ತಿರುವ ಶಾಲೆ ಎಂಬ ಕಾರಣಕ್ಕೆ ನಿರ್ಲಕ್ಷೃದಿಂದ ನೋಡಲಾಗುತ್ತಿದೆ. ನಾವು ಭೇಟಿ ನೀಡುತ್ತೇವೆ ಎಂಬ ಕಾರಣಕ್ಕೆ ಶಾಲಾ ಆವರಣದಲ್ಲಿ ಕಾಟಾಚಾರಕ್ಕೆ ಒಂದಷ್ಟು ಶುಚಿತ್ವದ ಕಾರ್ಯ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.