ವಿನಾಶದಂಚಿನ ಕಾಡುಬೀಜಗಳ ಸಂರಕ್ಷಕ ಗಣಪತಿ

Seeds of various plants
Published on

ಸಿದ್ದಾಪುರ: ಸರ್ಕಾರದ ಯಾವುದೇ ಅನುದಾನ, ಸೌಲಭ್ಯ ಪಡೆದುಕೊಳ್ಳದೆ ಹಾಗೂ ಪ್ರಚಾರ ಬಯಸದೆ ಪರಿಸರದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ವಿನಾಶದಂಚಿನಲ್ಲಿರುವ ಕಾಡುಬೀಜಗಳನ್ನು ಸಂಗ್ರಹಿಸುತ್ತ ಪರಿಸರದ ಉಳಿವಿಗಾಗಿ ಶ್ರಮಿಸುತ್ತಿರುವವರು ಕೃಷಿಕ ಗಣಪತಿ ಹೆಗಡೆ ವಡ್ಡಿನಗದ್ದೆ.

ರಾಜ್ಯ ಅರಣ್ಯ ಇಲಾಖೆಯವರು 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ನಡೆಸಿದ ಬೀಜೋತ್ಸವ ಕಾರ್ಯಕ್ರಮವನ್ನು 2009ರಲ್ಲಿಯೇ ಗಣಪತಿ ಅವರು ತಮ್ಮ ಕಲ್ಪನೆಯಲ್ಲಿ ‘ಸಾವಿರ ಬೀಜದ ಸಹಜಕಾಡು’ ಶಿರೋನಾಮೆಯಲ್ಲಿ ಆಯೋಜಿಸಿದ್ದರು.

35ಕ್ಕೂ ಹೆಚ್ಚು ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುವುದರ ಜತೆಗೆ ಪರಿಸರವನ್ನೇ ಉಸಿರಾಗಿಸಿಕೊಂಡು ವಿನಾಶದಂಚಿನಲ್ಲಿರುವ ಕಾಡುಬೀಜಗಳನ್ನು ಸಂಗ್ರಹಿಸಿ ಸಸಿ ಮಾಡಿ ಆಸಕ್ತರಿಗೆ ವಿತರಿಸುತ್ತಿರುವ ಗಣಪತಿ ಅವರಿಗೆ ಪ್ರಗತಿಪರ ಕೃಷಿಕರಾದ ತಂದೆ ಮಹಾಬಲೇಶ್ವರ ಹೆಗಡೆ ಅವರೇ ಮಾದರಿ.

ಚಿಕ್ಕಂದಿನಲ್ಲಿಯೇ ತಂದೆ ಜತೆ ಗುಡ್ಡ ಬೆಟ್ಟ ಹತ್ತಿ ಗಿಡ-ಮರಗಳ ಪರಿಚಯ ಮಾಡಿಕೊಂಡು ಪರಿಸರ ಉಳಿಸುವ ಮಹದಾಸೆಯಿಂದ ತಜ್ಞರು, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ಜತೆ ಮುಕ್ತ ಮನಸ್ಸಿನಿಂದ ಪರಿಸರದ ವಿವಿಧ ಆಯಾಮಗಳ ಕುರಿತು ತಿಳಿದುಕೊಂಡವರು.

ರಂಗಭೂಮಿ, ಕೃಷಿ, ಛಾಯಾಗ್ರಹಣ ಹೀಗೆ ಹಲವು ರಂಗಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಸಾವಯವ ಕೃಷಿಕರೂ ಆಗಿದ್ದಾರೆ. ಹಲವರ ಸಲಹೆ ಪಡೆದು ಮನೆಯ ಸುತ್ತಲಿನ ಅರಣ್ಯದಲ್ಲಿ ಅಶೋಕವನ, ನಕ್ಷತ್ರವನ, ದೇವದಾರು ಮತ್ತು ದಾರುಹರಿದ್ರ ಬನ ನಿರ್ಮಿಸಿದ್ದಾರೆ.

ಅಪರೂಪದ-ವಿನಾಶದಂಚಿನ ಬೀಜ: ಬಿಳಿ ಬೂರಲ, ಬಿಳಿ ಮುರಗಲ, ಪಾಟಲಿ, ಪುತ್ರನ್‌ಜೀವಿ, ಬಿಳಿ ಮುತ್ತುಗ, ಕೆಂಪು ಉಪ್ಪಾಗೆ, ಕೆಂಪು ನೇರಳೆ, ಬಿಳಿಮತ್ತಿ, ದೇವದಾರು, ಸರ್ಪಗಂದಿ, ಜಾಲ, ಪರ್ಕಬಾಳೆ, ಹಾಲೆ, ತುಂಬ್ರಿ ಹಣ್ಣು, ಅಂಕೋಲೆ, ಪರಗಿ, ಕವಳಿ, ರಂಜಲು, ಏಕನಾಯಕ ಸೇರಿದಂತೆ 200ಕ್ಕೂ ಹೆಚ್ಚು ಜಾತಿಯ ಗಿಡ, ಹಣ್ಣು ಹಾಗೂ ಔಷಧ ಸಸ್ಯಗಳ ಬೀಜಗಳನ್ನು ಜಿಲ್ಲೆ- ಹೊರಜಿಲ್ಲೆಗಳ ಕಾಡಿನಿಂದ ಸಂಗ್ರಹಿಸಿ ತಂದು ಸಸಿ ಮಾಡಿ ಅರಣ್ಯ ಇಲಾಖೆ ಹಾಗೂ ಆಸಕ್ತರಿಗೆ ನೀಡುತ್ತಿದ್ದಾರೆ.

ವಿಶೇಷವಾಗಿ ಅಪ್ಪೆ ಮಾವಿನ ಕಸಿ ಮಾಡುವುದರಲ್ಲಿ ಗಣಪತಿ ಸಿದ್ಧ್ದಹಸ್ತರು. ಅಳಿವಿನಂಚಿನಲ್ಲಿರುವ ಅನೇಕ ಔಷಧ ಗಿಡ, ಬೆಲೆ ಬಾಳುವ ವಿವಿಧ ಜಾತಿಯ ಗಿಡಗಳನ್ನು ಬೆಳೆಸುತ್ತಿರುವುದು ಇಂದಿನ ಯುವ ಸಮೂಹಕ್ಕೆ ಮಾದರಿ ಆಗಿದ್ದಾರೆ.

ಪರಿಸರ ಜಾಗೃತಿ ಪಾಠ: ಗಣಪತಿ ಹೆಗಡೆ ಅವರು ಭಾರತೀ ಸಂಪದ ಎಂಬ ಸಂಸ್ಥೆ ಕಟ್ಟಿಕೊಂಡು ಸಾವಿರ ಬೀಜ-ಸಹಜ ಕಾಡು ಎನ್ನುವ ಶೀರ್ಷಿಕೆಯಡಿ ಪರಿಸರ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ಹಾಗೂ ಕಾಡುಬೀಜಗಳ ಪರಿಚಯ ಮಾಡಿಕೊಡುತ್ತ, ಸಂವಾದ ನಡೆಸುತ್ತ ಬಂದಿದ್ದಾರೆ.

ಸಾಗರ ತಾಲೂಕಿನ ಕಣಸೆ ಗ್ರಾಮದಲ್ಲಿರುವ ಐದು ನೂರಕ್ಕೂ ಹೆಚ್ಚು ವರ್ಷದ ಕಣಸೆ ಕರಿ ಅಪ್ಪೆ ಮಾವಿನ ಸಂತತಿ ಉಳಿಸಬೇಕೆಂದು ಕಸಿ ಕಟ್ಟಿ ಅದರ ತಳಿಗಳನ್ನು ಬೆಳೆಸುತ್ತಿದ್ದಾರೆ.

ತಮ್ಮಷ್ಟಕ್ಕೆ ತಾವು ಪರಿಸರವನ್ನು ಉಳಿಸಲು ಸಂಪೂರ್ಣ ತೊಡಗಿಸಿಕೊಂಡಿರುವ ಗಣಪತಿ ಹೆಗಡೆ ವಡ್ಡಿನಗದ್ದೆ ಅವರಂಥವರನ್ನು ರಾಜ್ಯ ಸರ್ಕಾರ, ಅರಣ್ಯ ಇಲಾಖೆಯವರು ಗುರುತಿಸಿ ಪ್ರೋತ್ಸಾಹಿಸಿದರೆ ಅವರಿಂದ ಇನ್ನೂ ಹೆಚ್ಚು ಸೇವೆ ದೊರೆಯಲು ಸಾಧ್ಯ.
ಆಸಕ್ತರು ಗಣಪತಿ ಅವರನ್ನು ಮೊಬೈಲ್ ಸಂಖ್ಯೆ: 8762213573 ಮೂಲಕ ಸಂಪರ್ಕಿಸಬಹುದು.

ಪರಿಸರ ಎಂದರೆ ಕೇವಲ ಗಿಡ, ಮರ ಎಂದು ಭಾವಿಸಬಾರದು. ಎಲ್ಲ ಜೀವ ವೈವಿಧ್ಯ ಲಕ್ಷೃದಲ್ಲಿಟ್ಟುಕೊಂಡು ಪರಿಸರ ಕಟ್ಟಬೇಕು. ಸಸ್ಯ ಸಂಕುಲ, ಪಶು-ಪಕ್ಷಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇಂದಿನ ಯುವ ಸಮೂಹ ಹಾಗೂ ಅರಣ್ಯ ಇಲಾಖೆಯವರು ಕೆಲಸ ಮಾಡುವ ಅಗತ್ಯವಿದೆ. ಗಣಪತಿ ಹೆಗಡೆ ವಡ್ಡಿನಗದ್ದೆ, ಪರಿಸರ ಪ್ರೇಮಿ ವಿನಾಶದಂಚಿನಲ್ಲಿರುವ ನೂರಾರು ಕಾಡು ಬೀಜಗಳನ್ನು ಸಂಗ್ರಹಿಸಿ ಪರಿಸರದ ಉಳಿವಿಗಾಗಿ ವಿವಿಧ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಎಲ್ಲರಿಗೂ ಮಾದರಿ. ಇವರು ಅರಣ್ಯದ ಆಸ್ತಿ. ಅರಣ್ಯ ಇಲಾಖೆಗೂ ತಾವು ಸಂಗ್ರಹಿಸಿದ ಬೀಜ ಹಾಗೂ ಸಸ್ಯಗಳನ್ನು ನೀಡುತ್ತಿದ್ದಾರೆ. ಇಂಥವರಿಂದಲೇ ಅರಣ್ಯ ಸಂಪತ್ತು ಬೆಳೆಯುತ್ತದೆ.> ಸಿ.ಎನ್. ಹರೀಶ, ಎಸಿಎಫ್ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net