12 ಲಕ್ಷ ರೂಪಾಯಿ ಉಳಿತಾಯ ಬಜೆಟ್

23srt-1
Published on

ಶಿರಹಟ್ಟಿ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಯವ್ಯಯ ಮಂಡನೆ ಸಭೆಯಲ್ಲಿ ಅಧ್ಯಕ್ಷ ಪರಮೇಶ ಪರಬ ಅವರು 2021-22ನೇ ಸಾಲಿನ 12 ಲಕ್ಷ 67 ಸಾವಿರ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.

ವಿವಿಧ ಮೂಲಗಳಿಂದ 7 ಕೋಟಿ 36 ಲಕ್ಷ 45 ಸಾವಿರ 318 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 7 ಕೋಟಿ 23 ಲಕ್ಷ 77 ಸಾವಿರ ರೂಪಾಯಿ ಖರ್ಚು ಅಂದಾಜಿಸಲಾಗಿದೆ. 12 ಲಕ್ಷ 67 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದರು.

ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿ ಅನುದಾನ (ಎಸ್​ಎಫ್​ಸಿ) 36 ಲಕ್ಷ 7 ಸಾವಿರ ರೂಪಾಯಿ, ಎಸ್​ಎಫ್​ಸಿ ಸಿಬ್ಬಂದಿ ವೇತನ ಅನುದಾನ 62 ಲಕ್ಷ ರೂಪಾಯಿ, 15ನೇ ಹಣಕಾಸು ಅನುದಾನ 1 ಕೋಟಿ 49 ಲಕ್ಷ 60 ಸಾವಿರ ರೂಪಾಯಿ, ಎಸ್​ಎಫ್​ಸಿ ವಿದ್ಯುತ್ ಅನುದಾನ 60 ಲಕ್ಷ ರೂಪಾಯಿ, ವಾಣಿಜ್ಯ ಮಳಿಗೆ, ಭೂ ಬಾಡಿಗೆಯಿಂದ 2 ಲಕ್ಷ 17 ಸಾವಿರ ರೂಪಾಯಿ, ಕಟ್ಟಡ ಪರವಾನಗಿಯಿಂದ 2 ಲಕ್ಷ 50 ಸಾವಿರ ರೂಪಾಯಿ, ನೀರು ಸರಬರಾಜು ಮೂಲಗಳಿಂದ 20 ಲಕ್ಷ 30 ಸಾವಿರ ರೂಪಾಯಿ, ಆಸ್ತಿ ತೆರಿಗೆ ಮತ್ತು ದಂಡದ ರೂಪದಲ್ಲಿನ ಆದಾಯ 36 ಲಕ್ಷ 95 ಸಾವಿರ ರೂಪಾಯಿ, ಅನುದಾನ ಮತ್ತು ದೇಣಿಗೆಗಳಿಂದ ಸೃಷ್ಟಿಸಿದ ಆದಾಯ 2 ಕೋಟಿ 89 ಲಕ್ಷ 85 ಸಾವಿರ ರೂಪಾಯಿ, ಅಸಾಧಾರಣ ಮತ್ತು ಇತರ ಆದಾಯಗಳಿಂದ 30 ಲಕ್ಷ 75 ಸಾವಿರ ರೂಪಾಯಿ, ರಾಜಸ್ವ ಆದಾಯದಿಂದ 2 ಕೋಟಿ 60 ಲಕ್ಷ 38 ಸಾವಿರ ರೂಪಾಯಿ, ಅಸಾಧಾರಣ ಸ್ವೀಕೃತಿಗಳಿಂದ 1 ಕೋಟಿ 86 ಲಕ್ಷ 21 ಸಾವಿರ 4 ರೂಪಾಯಿ, ಖಾತಾ ಬದಲಾವಣೆಯಿಂದ 3 ಲಕ್ಷ 50 ಸಾವಿರ ರೂಪಾಯಿ ಹಾಗೂ ಇತರ ಯೋಜನೆಗಳಿಂದ 30 ಲಕ್ಷ ರೂಪಾಯಿ ಒಟ್ಟಾರೆ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಯಾವುದಕ್ಕೆ ಎಷ್ಟು ಖರ್ಚು?:

ನೌಕರರ ವೇತನಕ್ಕಾಗಿ 55 ಲಕ್ಷ ರೂಪಾಯಿ, ಕೂಲಿ ರೂಪದಲ್ಲಿನ ವೇತನಕ್ಕೆ 35 ಲಕ್ಷ 40 ಸಾವಿರ ರೂಪಾಯಿ, ನೀರು ಸರಬರಾಜುದಾರರು, ಪೌರ ಕಾರ್ವಿುಕರು, ಕಂಪ್ಯೂಟರ್ ಆಪರೇಟರ್ ಗೌರವಧನ 10 ಲಕ್ಷ 92 ಸಾವಿರ ರೂಪಾಯಿ, ವಿದ್ಯುತ್ ಸುಡತಿ ಬಿಲ್ 60 ಲಕ್ಷ ರೂಪಾಯಿ, ಹೊರ ಗುತ್ತಿಗೆ ಕಾರ್ಯಾಚರಣೆಗಳು 18 ಲಕ್ಷ ರೂಪಾಯಿ, ಕಟ್ಟಡ, ಬೀದಿ ದೀಪಗಳು, ವಾಹನ ದುರಸ್ತಿ ಮತ್ತು ನಿರ್ವಹಣೆ, ನೀರು ಸರಬರಾಜು ಸಾಮಗ್ರಿ ಖರೀದಿ ಸೇರಿದಂತೆ ಇತರ ವೆಚ್ಚ 40 ಲಕ್ಷ ರೂಪಾಯಿ, ರಸ್ತೆ ಮತ್ತು ಫುಟ್​ಪಾತ್ ನಿರ್ಮಾಣ 1 ಕೋಟಿ 48 ಲಕ್ಷ 80 ಸಾವಿರ ರೂಪಾಯಿ, ಗಟಾರ್ ನಿರ್ವಣಕ್ಕೆ 1 ಕೋಟಿ 9 ಲಕ್ಷ 33 ಸಾವಿರ ರೂಪಾಯಿ, ಬೀದಿ ದೀಪಗಳ ಲೈನ್ ಅಳವಡಿಸಲು 14 ಲಕ್ಷ 32 ಸಾವಿರ ರೂಪಾಯಿ, ನೀರು ಸರಬರಾಜು ವ್ಯವಸ್ಥೆಗೆ 39 ಲಕ್ಷ 74 ಸಾವಿರ ರೂಪಾಯಿ, ಕಚೇರಿ ಸಲಕರಣೆ ಖರೀದಿ 6 ಲಕ್ಷ ರೂಪಾಯಿ, ಉದ್ಯಾನ ಅಭಿವೃದ್ಧಿ ಮತ್ತು ನಾಗರಿಕ ವಿನ್ಯಾಸಗಳಿಗೆ 13 ಲಕ್ಷ ರೂಪಾಯಿ, ಅಸಾಧಾರಣ ಪಾವತಿ ರೂಪದಲ್ಲಿ (ನೌಕರರ ವೇತನ ಕಡತಗಳು, ಗುತ್ತಿಗೆದಾರರ ಕಡತಗಳು ಮತ್ತು ನಲ್ಮ್ ಯೋಜನೆಗಳಿಗೆ) 66 ಲಕ್ಷ 13 ಸಾವಿರ ರೂಪಾಯಿ ಖರ್ಚು ಬರಲಿದೆ ಎಂದರು.

ಪಪಂ ವ್ಯಾಪ್ತಿಯ 18 ವಾರ್ಡ್​ಗಳ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಮೀಸಲಿರಿಸಿದೆ. ವಸತಿರಹಿತ ಬಡವರಿಗೆ ಆಶ್ರಯ ಮನೆ, ಉದ್ಯಾನಗಳ ಅಭಿವೃದ್ಧಿ, ಕುಡಿಯುವ ಶುದ್ಧ ನೀರಿನ ಘಟಕಗಳಿಗೆ ಆದ್ಯತೆ ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಬಜೆಟ್ ಸ್ವಾಗತಿಸಿದರು.

ಉಪಾಧ್ಯಕ್ಷ ಮಹ್ಮದ್​ಇಸಾಕ್ ಆದ್ರಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಮುಖ್ಯಾಧಿಕಾರಿ ಮಲ್ಲೇಶ ಎಂ, ಅಕೌಂಟಂಟ್ ಗುರುನಾಥ ಪಾತಾಳಿ, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net