ಒಂದೇ ಕುಟುಂಬದ ನಾಲ್ವರು ಸಹೋದರರ ಪ್ರಾಣ ಹೊತ್ತೊಯ್ದ ಜವರಾಯ! ಬೆಚ್ಚಿಬೀಳಿಸುತ್ತೆ ಆ ಸಂಜೆಯ ಘಟನೆ

death
Published on

ಅಥಣಿ (ಬೆಳಗಾವಿ): ಅಥಣಿ ತಾಲೂಕಿನ ಹಲ್ಯಾಳ ಸಮೀಪದ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಹೋದರರು ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಲ್ಯಾಳ ಗ್ರಾಮದ ಪರಸಪ್ಪ ಗೋಪಾಲ ಬನಸೂಡೆ (42), ಸದಾಶಿವ ಗೋಪಾಲ ಬನಸೋಡೆ (36), ಧರೆಪ್ಪ ಗೋಪಾಲ ಬನಸೋಡೆ (25) ಹಾಗೂ ಶಂಕರ ಗೋಪಾಲ ಬನಸೋಡೆ(23) ಮೃತ ದುರ್ದೈವಿಗಳು.

ಲಾಲಸಾಬ್ ಉರುಸ್ ಹಿನ್ನೆಲೆಯಲ್ಲಿ ಬಟ್ಟೆ ಮತ್ತು ಹಾಸಿಗೆ ತೊಳೆಯಲು ಈ ನಾಲ್ವರು ಸಹೋದರರು ಕೃಷ್ಣಾ ನದಿಗೆ ಸೋಮವಾರ ತೆರಳಿದ್ದರು. ಧರೆಪ್ಪ ಎಂಬಾತ ಮೊದಲು ಕಾಲು ಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಉಳಿದ ಮೂವರೂ ನದಿಗೆ ಹಾರಿದ್ದಾರೆ. ಆದರೆ, ನಾಲ್ವರೂ ನೀರಿನಲ್ಲಿ ಕೊಚ್ಚಿಹೋಗಿದ್ದರು. ಅವರ ಪತ್ತೆಗೆ ಅಂದೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜುಗಾರರು ಶೋಧ ಮುಂದುವರಿಸಿದ್ದರಾದರೂ ಪತ್ತೆಯಾಗಿರಲಿಲ್ಲ.

ಮಂಗಳವಾರ ಮಧ್ಯಾಹ್ನ ಪರಶುರಾಮ ಗೋಪಾಲ ಬನಸೋಡೆ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಬುಧವಾರ ಮೂವರ ಶವಗಳನ್ನು ಎನ್​ಡಿಆರ್​ಎಫ್ ಹಾಗೂ ಸ್ಥಳೀಯರು ಹೊರ ತೆಗೆದಿದ್ದಾರೆ. ಸಹೋದರರ ಶವಗಳು ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಧಿಕಾರಿಗಳು, ಗ್ರಾಮಸ್ಥರು ಎಷ್ಟೇ ಸಂತೈಸಿದರೂ ಅವರ ಕಣ್ಣೀರಧಾರೆ ನಿಲ್ಲುತ್ತಿಲ್ಲ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net