

ಗಜೇಂದ್ರಗಡ: ಯುವಪೀಳಿಗೆ ಸೇವಾಲಾಲ್ ಅವರನ್ನು ಪೂಜಿಸುವುದಾದರೆ ಅವರು ಅನುಸರಿಸಿದ ತತ್ವಗಳನ್ನು ಪಾಲಿಸಲು ಆದ್ಯತೆ ನೀಡಬೇಕು ಎಂದು ಪುರಸಭೆ ಸದಸ್ಯ ರೂಪಲೇಶ ರಾಠೋಡ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ವತಿಯಿಂದ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದುಶ್ಚಟಗಳಿಗೆ ಬಲಿಯಾಗದಂತೆ ಅವರು ಸಾರಿದ ಸಂದೇಶವನ್ನು, ಕಂದಾಚಾರಗಳಿಗೆ ಬಲಿಯಾಗದಂತೆ ಎಚ್ಚರಿಸಿದ ವೈಜ್ಞಾನಿಕ ಮನೋಭಾವವನ್ನು, ಸಕಲ ಚರಾಚರ ಜೀವಿಗಳಿಗೂ ಒಳಿತಾಗಲಿ ಎಂಬ ವಿಶ್ವಮಾನವ ತತ್ವವನ್ನು ಅನುಸರಿಸಬೇಕು. ಹೆಣ್ಣುಮಕ್ಕಳಿಗೆ ಸಮಾನ ಗೌರವ ಮತ್ತು ಸ್ವಾತಂತ್ರೃ ಸಿಗಬೇಕು ಎಂದು ಅವರು ಹೇಳಿದ ಸಮಾನತೆಯ ಅಂಶಗಳನ್ನು ಪಾಲಿಸುವವರಾಗಬೇಕು ಎಂದರು.
ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಕನಕಪ್ಪ ಅರಳಿಗಿಡದ, ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ಯಮನಪ್ಪ ತಿರಕೋಜಿ, ಶರಣಪ್ಪ ಉಪ್ಪಿನಬೆಟಗೇರಿ, ರವಿ ಶಿಂಗ್ರಿ, ಸಿದ್ದಪ್ಪ ಚೋಳಿನ, ಮಾರುತಿ ರಾಠೋಡ, ಮಾರುತಿ ಅಜಮೀರ, ಇತರರು ಇದ್ದರು.
ವಿವಿಧೆಡೆ ಆಚರಣೆ: ಪಟ್ಟಣದ ಕೆಜಿಎಂಎಸ್ ಶಾಲೆ, ಬ್ರೈಟ್ ಬಿಗಿನಿಂಗ್ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3, ಬಿಜೆಪಿ ಕಚೇರಿ, ಹೆಸ್ಕಾಂ ಕಚೇರಿಯಲ್ಲಿ ಸಂತ ಸೇವಾಲಾಲ್ ಅವರ ಜಯಂತಿ ಆಚರಿಸಲಾಯಿತು.