ಸಂಘರ್ಷವಿಲ್ಲದೆ ಪರಿವರ್ತನೆ ತಂದ ಸಂತ: ನಾರಾಯಣಗುರು ಜನ್ಮದಿನಾಚರಣೆಯಲ್ಲಿ ಶಾಸಕ ರಾಜೇಶ್ ನಾಯ್ಕ ಅಭಿಮತ

Narayana
Published on

ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 169ನೇ ಜನ್ಮದಿನಾಚರಣೆ ಭಾನುವಾರ ಬಿ.ಸಿ.ರೋಡಿನ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಶಾಸಕ ರಾಜೇಶ್ ನಾಯ್ಕ ಮಾತನಾಡಿ, ಸಂಘರ್ಷವಿಲ್ಲದೆ ಸಮಾಜದಲ್ಲಿ ಪರಿವರ್ತನೆ ತಂದ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಸಂಸದ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಧಾರೆಯನ್ನು ತಿಳಿದುಕೊಳ್ಳುವ ಮೊದಲು ಅವರಿದ್ದ ಕಾಲಸ್ಥಿತಿ ಅರಿತುಕೊಳ್ಳಬೇಕಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ, ಅಸ್ಪ್ರಶ್ಯತೆ ಉಚ್ಛ್ರಾಯಸ್ಥಿತಿಯಲ್ಲಿದ್ದ ಸಂದರ್ಭ ಸಾಮಾನ್ಯ ವ್ಯಕ್ತಿಯೊಬ್ಬ ದೈವತ್ವಕ್ಕೇರಿ ಸಮಾಜದಲ್ಲಿ ಪರಿವರ್ತನೆ ತರುತ್ತಾರೆಂದರೆ ಅವರ ಸಿದ್ಧಿ ಮತ್ತು ಸಾಧನೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಧ್ಯಾತ್ಮ ಹಾಗೂ ಶಿಕ್ಷಣದ ಮಹತ್ವ ತಿಳಿಸಿಕೊಟ್ಟ ಕ್ರಾಂತಿ ಪುರುಷ ನಾರಾಯಣಗುರುಗಳು. ಅವರ ಚಿಂತನೆಯನ್ನು ಬಂಟ್ವಾಳ ಬಿಲ್ಲವರ ಸಂಘ ಅನುಷ್ಠಾನಗೊಳಿಸುತ್ತಿರುವುದು ಅಭಿನಂದನೀಯ ಎಂದರು. ಇದೇ ಸಂದರ್ಭ ತನ್ನ ಅನುದಾನದಿಂದ ನಿರ್ಮಾಣಗೊಂಡ ಶೌಚಗೃಹ ಹಾಗೂ ಇಂಟರ್‌ಲಾಕ್ ವ್ಯವಸ್ಥೆ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಗುರುಕೃಪಾ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸಿಬಿಐ ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಉಪನ್ಯಾಸ ನೀಡಿದರು. ರಂಗಭೂಮಿ, ಚಲನಚಿತ್ರ ಕಲಾವಿದ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಲಾಯಿತು.

ಎಸಿಪಿ ಮಹೇಶ್ ಕುಮಾರ್, ಯುವವಾಹಿನಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್, ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕೋಶಾಧಿಕಾರಿ ಆನಂದ ಸಾಲ್ಯಾನ್, ಜತೆ ಕಾರ್ಯದರ್ಶಿ ರಾಜೇಶ್ ಸುವರ್ಣ ಮಿತ್ತಬೈಲು, ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ತಾಲೂಕಿನ 32 ಬಿಲ್ಲವ ಸಂಘದ ಅಧ್ಯಕ್ಷರು, ಬಿಲ್ಲವ ಸಮಾಜದ ನೂತನ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ ಸ್ವಾಗತಿಸಿ, ಲೆಕ್ಕಪರಿಶೋಧಕ ಹೇಮಂತ್ ಕುಮಾರ್ ವಂದಿಸಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಬಿಲ್ಲವರು ಹಿಂದುಳಿದವರು ಅಲ್ಲ. ಆ ಮನೋಸ್ಥಿತಿಯನ್ನು ಬಿಲ್ಲವರು ಬಿಡಬೇಕು, ನಮ್ಮ ಹಿಂದಿನ ಪರಂಪರೆ ನೋಡಿದಾಗ ಇದು ಅರಿವಾಗುತ್ತದೆ. ವಿದ್ಯೆಗೆ ಮಹತ್ವ ನೀಡಿದಾಗ ಮನೆ ಬೆಳಗುತ್ತದೆ. ಆದ್ದರಿಂದ ಶಿಕ್ಷಣದತ್ತ ಬಿಲ್ಲವರು ಗಮನ ಹರಿಸಬೇಕು. ಮೌಢ್ಯದ ಗುಡಿಯಿಂದ ವೈಚಾರಿಕತೆಯ ಗೂಡಿನತ್ತ ಹೆಜ್ಜೆ ಇಡಬೇಕು.- ಹರಿಕೃಷ್ಣ ಬಂಟ್ವಾಳ್, ಮಾಜಿ ಅಧ್ಯಕ್ಷ, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net