ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಸಂತ

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿಯನ್ನು ಶಾಸಕ ಅನಿಲ್ ಕುಮಾರ್ ಉದ್ಘಾಟಿಸಿದರು.
ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿಯನ್ನು ಶಾಸಕ ಅನಿಲ್ ಕುಮಾರ್ ಉದ್ಘಾಟಿಸಿದರು.
Published on

ಎಚ್.ಡಿ.ಕೋಟೆ: ಜಾತಿ ವ್ಯವಸ್ಥೆ ವಿರುದ್ಧ ಕನಕದಾಸರು ಕೀರ್ತನೆಗಳ ಮೂಲಕ ದನಿಯಾಗಿದ್ದರು ಎಂದು ಶಾಸಕ ಅನಿಲ್ ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಭಕ್ತ ಕನಕದಾಸರ 537ನೇ ಜಯಂತಿಯಲ್ಲಿ ಮಾತನಾಡಿದರು. ಹರಿಭಕ್ತರಾದ ಕನಕದಾಸರು 1509ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಕುರುಬ ಸಮುದಾಯದ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು. ದೇವರ ಲೀಲೆಯಿಂದ ಬದುಕುಳಿದ ನಂತರ ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು ಎಂದರು.

ವಿಜಯನಗರ ಸಾಮ್ರಾಜ್ಯದ 70 ಹಳ್ಳಿಗಳ ಪಾಳೆಗಾರರಾಗಿದ್ದ ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ದಾರಿ ದೀಪವಾದರು. ಜತೆಗೆ ಸಮಾಜದ ಸಮಾನತೆಗಾಗಿ ನಿರಂತರವಾಗಿ ಶ್ರಮಿಸಿದರು ಎಂದು ಸ್ಮರಿಸಿದರು.

ಐದು ಜಿಲ್ಲೆಗೆ ಮಾದರಿಯಾಗಿ ಪಟ್ಟಣದಲ್ಲಿ ಕನಕ ಭವನವನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸರ ಮಾದರಿಯಲ್ಲೇ ಸಮ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಶಿಕ್ಷಕ ರಮೇಶ್ ಮಾತನಾಡಿ, ಭಕ್ತಿ ಮಾರ್ಗದ ಮೂಲಕ ಕನಕದಾಸರು ಸಮಾಜದ ಒಳಿತಿಗಾಗಿ ಸಂದೇಶ ಸಾರಿದರು. ಅವರ ಸಂದೇಶ ಸಾವಿರಾರು ಜನರ ಬದುಕಿಗೆ ನಾಂದಿಯಾಗಿದೆ. ಅವರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಜನರನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ಮಹಾನ್ ಚೇತನ ಕನಕದಾಸ. ದೇವರನ್ನು ಭಕ್ತಿಯಿಂದ ಒಲಿಸಿಕೊಳ್ಳಲು ಸಾಧ್ಯವಿದೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಧರಣೇಶ್, ಕುರುಬ ಸಮಾಜದ ಅಧ್ಯಕ್ಷ ಎಂ.ಬಿ.ಆನಂದ, ಮುಖಂಡರಾದ ಸತೀಶ್‌ಗೌಡ, ಚಿಕ್ಕವೀರನಾಯ್ಕ, ಏಜಾಜ್ ಪಾಷ, ವೀರೇಗೌಡ, ಪರಶಿವಮೂರ್ತಿ, ಸೌಮ್ಯಾ, ಅಶೋಕ್, ಮಾಲೆಗೌಡ, ಚಂದ್ರೇಗೌಡ, ಸಫಿ, ಜೀವಿತ ಬಸವರಾಜು, ಜವರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net