ತುಳುನಾಡಿನ ಸರ್ವಮಾನ್ಯ ನಾಯಕ, ಪೋಷಕ: ಡಾ.ಎ. ಸದಾನಂದ ಶೆಟ್ಟಿ ಸಾರ್ವಜನಿಕ ಅಭಿನಂದನೆಯಲ್ಲಿ ವೀರಪ್ಪ ಮೊಯ್ಲಿ ಶ್ಲಾಘನೆ

mng-aug26-townhall2
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ತುಳುನಾಡಿನ ಸಾಂಸ್ಕೃತಿಕ, ಕ್ರೀಡೆ, ಶೈಕ್ಷಣಿಕ ಪ್ರತಿಭೆಗಳನ್ನು ಜಾತಿ, ಮತಗಳ ಭೇದವಿಲ್ಲದೆ ಪ್ರೋತ್ಸಾಹಿಸುತ್ತಾ ಬಂದಿರುವ ಡಾ.ಎ. ಸದಾನಂದ ಶೆಟ್ಟಿ ಅವರು ಓರ್ವ ಸರ್ವಮಾನ್ಯ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ಅವರಿಗೆ ಮಂಗಳೂರಿನ ಡಾ.ಎ. ಸದಾನಂದ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಏರ್ಪಡಿಸಿದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಶ್ರೀದೇವಿ ಶಿಕ್ಷಣ ಟ್ರಸ್ಟ್‌ನ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿದ್ದಾರೆ. ನಾಡಿನ ಪ್ರಧಾನ ಯಶಸ್ವೀ ಕಾರ್ಯಕ್ರಮಗಳಲ್ಲಿ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಸದಾನಂದ ಶೆಟ್ಟಿ ಅವರ ಯಶಸ್ಸಿನ ಹಿಂದೆ ಬದ್ದತೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇದೆ. ಅರ್ಹವಾಗಿಯೇ ಕುವೆಂಪು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾತನಾಡಿ, ಜಾತ್ಯತೀತ ಮನೋಭಾವ ಹೊಂದಿರುವ ಶ್ರೇಷ್ಠ ವ್ಯಕ್ತಿತ್ವವನ್ನು ಸದಾನಂದ ಶೆಟ್ಟಿ ಅವರು ಹೊಂದಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಎ. ಸದಾನಂದ ಶೆಟ್ಟಿ, ಪ್ರೀತಿಯಿಂದ ದೊರೆತ ಅಭಿನಂದನೆಯಿಂದ ಮನಸ್ಸು ತುಂಬಿ ಬಂದಿದೆ. ಎಲ್ಲ ಸ್ನೇಹಿತರು, ಬಂಧುಗಳು, ಹಿತೈಷಿಗಳು, ಅಭಿಮಾನಿಗಳನ್ನು ಒಂದು ಅಪರೂಪದ ಸಂದರ್ಭದಲ್ಲಿ ಒಂದೇ ಕಡೆ ಭಾಗ್ಯ ದೊರೆತ್ತಿದೆ ಎಂದರು.
ಸ್ಥಳೀಯ ಸಂಸದರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸದಾನಂದ ಶೆಟ್ಟಿಯವರು ನಡೆದು ಬಂದ ಹೆಜ್ಜೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮುರಳೀಧರ ಕಾಮತ್ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ ಜೈನ್, ಉದ್ಯಮಿ ಪಾದೆ ಅಜಿತ್ ರೈ, ಸಂಗೀತ ನಿರ್ದೇಶಕ ಗುರುಕಿರಣ್, ಅಭಿನಂದನಾ ಸಮಿತಿ ಗೌರವಾಧ್ಯಕ್ಷ, ಎಂಆರ್‌ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ, ಶಾಸಕ ಸುರೇಶ ಶೆಟ್ಟಿ ಗುರ್ಮೆ ಮೊದಲಾದವರು ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ ಕಟೀಲು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net